ಮುಂಬೈ ಲೋಕಲ್ ಟ್ರೈನ್‌ನಲ್ಲಿ ಸರಣಿ ಅಪರಾಧಗಳ ಆತಂಕ!
- ಮುಂಬೈ ಲೋಕಲ್ ಟ್ರೈನ್‌ನಲ್ಲಿ ಸರಣಿ ಅಪರಾಧಗಳ ಆತಂಕ!
- ಮಯಾಂಕ್ ಲೋಹರ್ ಕೊಲೆ ಬಳಿಕ ಇನ್ನೊಬ್ಬನಿಗೆ ಚಾಕು ಇರಿತ
- ಮಾಹಿಮ್ ನಿಲ್ದಾಣದಲ್ಲಿ ನಡೆದಿರುವ ಘಟನೆ
- ಮೊಬೈಲ್ ಬೀಳಿಸಿದಕ್ಕೆ ನಡೆದ ದುರ್ಘಟನೆ
ಮುಂಬೈ: ಮಾಯಾ ನಗರಿ ಮುಂಬೈನ ಜೀವನಾಡಿ ಎಂದೇ ಎಲ್ಲಡೆ ಹೆಸರುವಾಸಿಯಾಗಿರುವ ಮುಂಬೈ ಲೋಕಲ್ ಟ್ರೇನ್ (Mumbai Local Train) ಈಗ ಸರಣಿ ಅಪರಾಧಗಳಿಂದ ಕುಖ್ಯಾತಿಗೆ ಗುರಿಯಾಗುತ್ತಿದೆ.
ಕೆಲ ದಿನಗಳ ಹಿಂದೆ 22 ವರ್ಷದ ಮಯಾಂಕ್ ಲೋಹರ್ ಎಂಬ ಯುವಕ ರೈಲಿನ ಬಾಗಿಲನ್ನು ಹಾಕಿಲ್ಲ ಎನ್ನುವುದಕ್ಕೆ ಕೊಲೆ ಮಾಡಿದ್ದ ಪ್ರಕರಣ ದೇಶದೆಲ್ಲಡೆ ಸುದ್ದಿಯಾಗಿತ್ತು. ಈಗ ಈ ಘಟನೆ ನಡೆದು 48 ಗಂಟೆ ಕಳೆಯವ ಮೊದಲೇ ವ್ಯಕ್ತಿಗೆ ಮಾಹಿಮ್ ರೈಲ್ವೆ ನಿಲ್ದಾಣದಲ್ಲಿ ಚಾಕು ಇರಿತವಾಗಿರುವ ಘಟನೆ ವರದಿಯಾಗಿದೆ.
ಮೊಬೈಲ್ ಒಡೆಯಿತು; ಚಾಕು ಇರಿಯಿತು!
ವರದಿ ಪ್ರಕಾರ, ಈ ಘಟನೆಯು ಗುರುವಾರ (ಜೂ. 25) ರಂದು ಮಾಹಿಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ. ಚಾಕು ಇರಿತಕ್ಕೆ ಒಳಗಾಗಿರುವ ವ್ಯಕ್ತಿಯನ್ನು35 ವರ್ಷದ ನವೀನ್ ಪ್ರಸನ್ನ ಎಂದು ಗುರುತಿಸಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ನವೀನ್, ರಾತ್ರಿ 10:15 ರ ಸುಮಾರಿಗೆ ಮಾಹಿಮ್ ನಿಲ್ದಾಣದಲ್ಲಿ ಕೆಳಗಿಳಿದಿದ್ದಾನೆ. ಆಗ ಇನ್ನೊಬ್ಬ ಪ್ರಯಾಣಿಕನ ಮೊಬೈಲ್ಗೆ ನವೀನ್ನ ಕೈ ತಲುಗಿ ಮೊಬೈಲ್ ಬಿದ್ದು ಒಡೆದು ಹೋಗಿದೆ. ಅದಕ್ಕೆ ಆ ವ್ಯಕ್ತಿ ಮೊಬೈಲ್ ಒಡೆದಿದ್ದಕ್ಕೆ ಹಣವನ್ನು ಕೇಳಿದ್ದಾನೆ. ಇದಕ್ಕೆ ನವೀನ್ ಒಪ್ಪದಿದ್ದಾಗ ಆ ವ್ಯಕ್ತಿ ತನ್ನಲ್ಲಿದ್ದ ಚಾಕುವನ್ನು ಹೊರತೆಗೆದು ನವೀನ್ನ ಹೊಟ್ಟೆಗೆ ಇರಿದಿದ್ದಾನೆ.
ನಂತರ ಆ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದಾನೆ. ಕೂಡಲೇ ನವೀನ್ನನ್ನು ಹತ್ತಿರದ ಸಿಯೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು ಸುಮಾರು 15 ಗಂಟೆ ಕಳೆದರೂ ನವೀನ್ನಿಗೆ ಪ್ರಜ್ಞೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲು!
ಈ ಘಟನೆಗೆ ಸಂಬಂಧಿಸಿದಂತೆ ಮಾಹಿಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಗಳನ್ನು ಜಾಲಾಡುತ್ತಾಗಿ ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಆ ವ್ಯಕ್ತಿಯೊಬ್ಬ ಮಾದಕ ವ್ಯಸನಿ ರೀತಿ ಕಾಣಿಸುತ್ತಿದ್ದ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿದಿದೆ.
ಮಯಾಂಕ್ ಲೋಹರ್ ಪ್ರಕರಣ!
ಮುಂಬೈ ಲೋಕಲ್ ರೈಲಿನಲ್ಲಿ ಮಂಗಳವಾರ (ಜೂ.23) ರಂದು ರೈಲಿನ ಬಾಗಿಲನ್ನು ಮುಚ್ಚುವಲ್ಲಿ ಪ್ರಾರಂಭವಾದ ವಾಗ್ವಾದವೊಂದು ಕೊಲೆಯಲ್ಲಿ ಕೊನೆಗೊಂಡ ಘಟನೆ ಜರುಗಿತ್ತು.
ಚರ್ಚ್‌ಗೇಟ್‌ನಿಂದ ನಲಸೋಪಾರಾ ಕಡೆಗೆ ಚಲಿಸುತ್ತಿದ್ದ ಲೋಕಲ್ ರೈಲಿನ ಫಸ್ಟ್ ಕ್ಲಾಸ್ ಬೋಗಿಯಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಮಯಾಂಕ್ ಲೋಹರ್ ಎಂಬಾತನನ್ನು ರೋಶನ್ ಸುವರ್ಣ ಎನ್ನುವವನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದನು.
ಮಾಹಿತಿ ಪ್ರಕಾರ, ಮೃತ ಮಯಾಂಕ್ ಲೋಹರ್ ಮತ್ತು ಆರೋಪಿ ರೋಶನ್ ಸುವರ್ಣ ನಡುವೆ ರೈಲಿನ ಬಾಗಿಲನ್ನು ಮುಚ್ಚುವ ವಿಚಾರವಾಗಿ ವಾಗ್ವಾದ ಏರ್ಪಟ್ಟಿದೆ. ಇದರಿಂದ ಕುಪಿತನಾದ ರೋಶನ್ ಸುವರ್ಣ ತನ್ನಲ್ಲಿದ್ದ ಚಾಕುವೊಂದನ್ನು ಹೊರತೆಗೆದು ಮಯಾಂಕ್ ಲೋಹರ್ ಮೇಲೆ ಮನಸೋ ಇಚ್ಛೇ ದಾಳಿ ಮಾಡಿದ್ದಾನೆ.