Ketan Agarwal Murder | ಕೇತನ್‌ನನ್ನು ಕಂದಕಕ್ಕೆ ತಳ್ಳಿದ ತಕ್ಷಣ ಸಿಯಾ ಆಡಿದ ಆ ಮೊದಲ ಮಾತುಗಳೇನು..? 
ದೇಶ

ಕೇತನ್‌ನನ್ನು ಕಂದಕಕ್ಕೆ ತಳ್ಳಿದ ತಕ್ಷಣ ಸಿಯಾ ಆಡಿದ ಆ ಮೊದಲ ಮಾತುಗಳೇನು..? ಭೀಕರ ಸತ್ಯ ಬಿಚ್ಚಿಟ್ಟ ಕೋಟೆಯ ಸೆಕ್ಯೂರಿಟಿ ಗಾರ್ಡ್ | Ketan Agarwal Murder

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ್ ಕೋಟೆಯಲ್ಲಿ ಕಳೆದ ಜೂನ್ 18 ರಂದು ನಡೆದ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Murder) ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಪಘಾತ ಎಂದು ಬಿಂಬಿಸಲಾಗಿದ್ದ ಈ ಪ್ರಕರಣ ಈಗ ಭೀಕರ ಕೊಲೆ ಎಂಬುದು ಸಾಬೀತಾಗಿದ್ದು, ಘಟನೆ ನಡೆದ ತಕ್ಷಣ ಅಲ್ಲಿ ಮೊದಲು ಧಾವಿಸಿದ್ದ ಕೋಟೆಯ ಸೆಕ್ಯೂರಿಟಿ ಗಾರ್ಡ್ ಧೀರಜ್ ಜಾಧವ್ ಅವರು ಆ ಕರಾಳ ಕ್ಷಣದ ಆಘಾತಕಾರಿ ವಿವರಗಳನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಘಟನೆಯ ಕುರಿತು ಮಾತನಾಡಿರುವ ಸೆಕ್ಯೂರಿಟಿ ಗಾರ್ಡ್ ಧೀರಜ್, ದೂರದಿಂದ ಜೋರಾಗಿ ಕಿರುಚುವ ಧ್ವನಿ ಕೇಳಿ ನಾನು ತಕ್ಷಣ ಆ ಜಾಗಕ್ಕೆ ಓಡಿ ಬಂದೆ. ಅಲ್ಲಿ ಮುಖ್ಯ ಆರೋಪಿಯಾಗಿರುವ ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಜೋರಾಗಿ ಅಳುತ್ತಾ ಸಹಾಯ ಮಾಡಿ, ಸಹಾಯ ಮಾಡಿ ಎಂದು ಕಿರುಚುತ್ತಿದ್ದಳು. ಏನಾಯ್ತು ಎಂದು ಕೇಳಿದ್ದಕ್ಕೆ, ಇಲ್ಲಿಂದ ಯಾರೋ ಕೆಳಗೆ ಬಿದ್ದುಬಿಟ್ಟರು (ಯಹಾ ಸೆ ಕೋಯಿ ಗಿರ್ ಗಯಾ ಹೈ) ಎಂದು ಹೇಳಿದಳು. ಆಕೆ ಗಾಬರಿಯಾದಂತೆ ನಟಿಸುತ್ತಿದ್ದಳು, ನಾನು ಸಮಯ ವ್ಯರ್ಥ ಮಾಡದೆ ತಕ್ಷಣ ಪೊಲೀಸರಿಗೆ ಫೋನ್ ಮಾಡಿದೆ ಎಂದು ತಿಳಿಸಿದ್ದಾರೆ.

ಪ್ರೀತಿಗೆ ಅಡ್ಡ ಬಂದವನ ಭೀಕರ ಕೊಲೆ!

ಮೊದಲು ಟ್ರೆಕ್ಕಿಂಗ್ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ ಎಂದು ನಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್‌ನನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಇಬ್ಬರನ್ನೂ ಬಂಧಿಸಿ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿದ್ದಾರೆ.

238 ಗಂಟೆಗಳ ಫೋನ್ ಕಾಲ್!

ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಕಳೆದ 6 ತಿಂಗಳಿನಿಂದ ಸಂಪರ್ಕದಲ್ಲಿದ್ದರು. ಇಬ್ಬರ ನಡುವೆ ಬರೋಬ್ಬರಿ 2,004 ಬಾರಿ ಫೋನ್ ಕಾಲ್ ನಡೆದಿದ್ದು, ಸುಮಾರು 238 ಗಂಟೆಗಳ ಕಾಲ ಮಾತನಾಡಿದ್ದಾರೆ. ಕೆಲವು ಕಾಲ್‌ಗಳು 3 ಗಂಟೆಗೂ ಹೆಚ್ಚು ಸಮಯ ಇರುತ್ತಿದ್ದವು. ಘಟನೆ ನಡೆದ ದಿನವೇ ಇವರಿಬ್ಬರೂ ಪುಣೆಯ ಕೆಫೆಯೊಂದರಲ್ಲಿ ಭೇಟಿಯಾಗಿ, ಕೇತನ್‌ನನ್ನು ಕೋಟೆಯ ಯಾವ ಜಾಗದಿಂದ ತಳ್ಳಬೇಕು ಎಂಬುದನ್ನು ಸ್ಕೆಚ್ ಹಾಕಿದ್ದರು. ಮೃತ ಕೇತನ್ ಅಗರ್ವಾಲ್ ಪುಣೆಯ ಹೆಸರಾಂತ ರಿಯಲ್ ಎಸ್ಟೇಟ್ ಕಂಪನಿ ಸಕ್ಸಸ್ ಗ್ರೂಪ್​ನ ಡೈರೆಕ್ಟರ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿದ್ದರು. ಆರೋಪಿ ಸಿಯಾ ಗೋಯಲ್ ವಾಣಿಜ್ಯ ಪದವೀಧರೆಯಾಗಿದ್ದಾಳೆ. ಇವರಿಬ್ಬರಿಗೂ ಕಳೆದ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಮುಂಬರುವ ನವೆಂಬರ್‌ನಲ್ಲಿ ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಮದುವೆಗೆ ತಯಾರಿ ನಡೆಸಲಾಗಿತ್ತು.

ಮೊದಲೂ ನಡೆದಿತ್ತು ಕೊಲೆ ಯತ್ನ!

ಸಿಯಾ ಪದೇ ಪದೇ ಕೇತನ್‌ನನ್ನು ಲೋಹಗಢ್ ಕೋಟೆಗೆ (ಸಮುದ್ರ ಮಟ್ಟದಿಂದ 3,300 ಅಡಿ ಎತ್ತರದಲ್ಲಿದೆ) ಬರುವಂತೆ ಒತ್ತಾಯಿಸುತ್ತಿದ್ದಳು. ಮೇ 31 ರಂದು ಇಬ್ಬರೂ ಕೋಟೆಗೆ ಹೋಗಿದ್ದರು. ಜೂನ್ 4 ರಂದು ಮತ್ತೊಮ್ಮೆ ಹೋಗಲು ಪ್ಲಾನ್ ಮಾಡಿದ್ದಾಗ ಕೇತನ್ ತಾಯಿ ಅದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಅಚ್ಚರಿಯ ವಿಷಯವೆಂದರೆ ಜೂನ್ 14 ರಂದು ನಡೆದ ಮತ್ತೊಂದು ಭೇಟಿಯ ವೇಳೆ, ಸಿಯಾ ಆತನನ್ನು ಕಂದಕಕ್ಕೆ ತಳ್ಳಲು ಯತ್ನಿಸಿದ್ದಳು, ಆದರೆ ಕೇತನ್ ಅದೃಷ್ಟವಶಾತ್ ಪೊದೆಯೊಂದನ್ನು ಹಿಡಿದು ಬದುಕುಳಿದಿದ್ದನು. ಯಾಕೆ ಹೀಗೆ ಮಾಡಿದೆ..? ಎಂದು ಕೇತನ್ ಕೇಳಿದಾಗ, ಅಲ್ಲಿ ಹಾವು ಇತ್ತು, ನಿನ್ನನ್ನು ರಕ್ಷಿಸಲು ಹಾಗೆ ಮಾಡಿದೆ ಎಂದು ಸಿಯಾ ಸುಳ್ಳು ಹೇಳಿ ನಂಬಿಸಿದ್ದಳು. ಆದರೆ ಕೊನೆಗೂ ಜೂನ್ 18 ರಂದು ಪ್ರಿಯಕರನ ಜೊತೆಗೂಡಿ ಆತನನ್ನು ಕಡಿದಾದ ಕಣಿವಿಗೆ ತಳ್ಳಿ ತನ್ನ ಹಠವನ್ನು ಸಾಧಿಸಿದ್ದಾಳೆ(ಏಜೆನ್ಸೀಸ್​​).