ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ 
ದೇಶ

ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ವಿಚಾರ; ಗೆಲ್ಲುವ ಸಾಧ್ಯತೆ ನೋಡಿ ಕ್ಷೇತ್ರಗಳ ಹಂಚಿಕೆ: ಅಖಿಲೇಶ್ ಯಾದವ್ | Akhilesh Yadav

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಿದ್ದತೆ ಜೋರಾಗಿದ್ದು, ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ವಿಷಯ ಕುರಿತು ಸೋಮವಾರ(ನ. 16) ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ(ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಮಾತುಕತೆ ಮುಂದುವರೆಯಲಿದ್ದು, ಯಾವ ಪಕ್ಷ ಗೆಲ್ಲುತ್ತೆದೆಯೋ ಆ ಪಕ್ಷಕ್ಕೆ ಕ್ಷೇತ್ರ ಹೋಗುತ್ತದೆ ಎಂದು ಹೇಳಿದ್ದಾರೆ.

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಿದ್ದತೆ ಜೋರಾಗಿದ್ದು, ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ವಿಷಯ ಕುರಿತು ಸೋಮವಾರ(ನ. 16) ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ(ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಮಾತುಕತೆ ಮುಂದುವರೆಯಲಿದ್ದು, ಯಾವ ಪಕ್ಷ ಗೆಲ್ಲುತ್ತೆದೆಯೋ ಆ ಪಕ್ಷಕ್ಕೆ ಕ್ಷೇತ್ರ ಹೋಗುತ್ತದೆ ಎಂದು ಹೇಳಿದ್ದಾರೆ.

ಮೈನ್‌ಪುರಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದೊಂದಿಗಿನ ನಮ್ಮ ಚರ್ಚೆಗಳು ಮುಂದುವರಿಯುತ್ತವೆ. ನಾವು ಪ್ರತಿಯೊಂದು ಅಂಶವನ್ನು ವಿವರವಾಗಿ ಚರ್ಚಿಸುತ್ತೇವೆ. ಯಾವ ಪಕ್ಷವು ಗೆಲ್ಲುವ ಸ್ಥಿತಿಯಲ್ಲಿದೆ ಎಂಬುದನ್ನು ಎರಡೂ ಪಕ್ಷಗಳು ಜಂಟಿಯಾಗಿ ನಿರ್ಧರಿಸುತ್ತವೆ. ಯಾವ ಪಕ್ಷವು ಸ್ಥಾನ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದೆಯೋ ಆ ಪಕ್ಷಕ್ಕೆ ಆ ಸ್ಥಾನವನ್ನು ನೀಡಲಾಗುವುದು ಎಂದಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಖಿಲೇಶ್, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದದಡಿಯಲ್ಲಿ ಕಾಂಗ್ರೆಸ್ 181 ಸ್ಥಾನಗಳನ್ನು ಬೇಡಿಕೆ ಇಟ್ಟಿದೆ ಎಂದು ತಿಳಿಸಿದ್ದರು. ಆದಾಗ್ಯೂ, ಇಂಡಿಯಾ ಕೂಟ ಒಗ್ಗಟ್ಟಿನಲ್ಲಿದ್ದು, ಆಡಳಿತಾರೂಢ ಬಿಜೆಪಿ ಸೋಲಿಸುವುದು ಮೈತ್ರಿಕೂಟದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದರು.

ಖರ್ಗೆ ನಿವಾಸದಲ್ಲಿ ಸಭೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು(ನ. 16) ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಿದೆ. 2027ರ ಚುನಾವಣೆಗೆ ಕ್ಷೇತ್ರವಾರು ಸಿದ್ಧತೆಗಳು, ಸೀಟು ಹಂಚಿಕೆ ಮತ್ತು ರಾಜ್ಯದಲ್ಲಿನ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.

ಸಭೆಯಲ್ಲಿ ರಾಹುಲ್ ಗಾಂಧಿ, ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, ಆರಾಧನಾ ಮಿಶ್ರಾ ಮತ್ತು ಇಮ್ರಾನ್ ಮಸೂದ್ ಭಾಗವಹಿಸಲಿದ್ದಾರೆ. ಇನ್ನೂ ನಾಳೆ(ನ. 17) ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೀಟು ಹಂಚಿಕೆ ಚರ್ಚೆ ನಡೆಸಲಿವೆ. 403 ವಿಧಾನಸಭಾ ಸ್ಥಾನಗಳಲ್ಲಿ 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿರುವ ಬಗ್ಗೆಯೂ ಮಾತುಕತೆ ನಡೆಯುವ ಸಾಧ್ಯತೆಯಿದೆ (ಏಜೆನ್ಸೀಸ್).