Gurugram Rape Case | 4 ವರ್ಷದ ಬಾಲಕಿಗೆ ನ್ಯಾಯ ಕೊಡಿಸಲು ಅಖಾಡಕ್ಕಿಳೀತು ಸುಪ್ರೀಂ ಕೋರ್ಟ್!
ನವದೆಹಲಿ: ಗುರುಗ್ರಾಮದ ಸೆಕ್ಟರ್ 54ರ ವಸತಿ ಸಂಕೀರ್ಣವೊಂದರಲ್ಲಿ 4 ವರ್ಷದ ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ (Gurugram Rape Case) ತನಿಖೆಯಲ್ಲಿ ಹರಿಯಾಣ ಪೊಲೀಸರ ವೈಫಲ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ನ್ಯಾಯಯುತ ತನಿಖೆಗಾಗಿ ಬುಧವಾರ ಮಹಿಳಾ ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ತನಿಖೆಯನ್ನು ತಕ್ಷಣವೇ ಎಸ್‌ಐಟಿಗೆ ಹಸ್ತಾಂತರಿಸುವಂತೆ ಮತ್ತು ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಗುರುಗ್ರಾಮ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ.
ಪೊಲೀಸರ ನಡೆಗೆ ನ್ಯಾಯಾಲಯದ ಛೀಮಾರಿ
ಪೋಕ್ಸೊ ಕಾಯ್ದೆಯಡಿ ಸ್ಪಷ್ಟವಾದ ಅಪರಾಧ ನಡೆದಿದ್ದರೂ, ಆರೋಪಿಗಳನ್ನು ರಕ್ಷಿಸಲು ಇಡೀ ಪೊಲೀಸ್ ಪಡೆಯೇ ಪ್ರಯತ್ನಿಸಿದೆ ಎಂದಿರುವ ನ್ಯಾಯಾಲಯ, 4 ವರ್ಷದ ಮಗುವನ್ನು ನೀವು ನಂಬುತ್ತಿಲ್ಲ ಎಂದರೆ ನಿಮಗೆ ನಾಚಿಕೆಯಾಗಬೇಕು ಎಂದು ಸಿಜೆಐ ಸೂರ್ಯ ಕಾಂತ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅತ್ಯಾಚಾರದಂತಹ ಗಂಭೀರ ಪ್ರಕರಣವನ್ನು ಕೇವಲ ಹಲ್ಲೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ಹಿರಿಯ ಅಧಿಕಾರಿಗಳ ನಡೆಯನ್ನು ಪೀಠವು ಖಂಡಿಸಿದ್ದು, ಇದು ಸಂತ್ರಸ್ತೆಗೆ ತೋರಿದ ಅಗೌರವೆಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ವೈಫಲ್ಯ
ಮಕ್ಕಳನ್ನು ರಕ್ಷಿಸಬೇಕಾದ ಸಿಡಬ್ಲ್ಯೂಸಿ ಸದಸ್ಯರು ಮಗುವನ್ನು ಒಂದು ಮೇಜು ಅಥವಾ ಕುರ್ಚಿಯಂತೆ ನಡೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಕಿಡಿಕಾರಿದ್ದು, ಮಗುವಿನ ಮನೆಗೆ ಹೋಗಿ ಸಾಂತ್ವನ ಹೇಳುವ ಬದಲು, ಮಗುವನ್ನು ಪದೇ ಪದೇ ಕಿರುಕುಳಕ್ಕೆ ಒಳಪಡಿಸಿದ ಇಂತಹ ಸದಸ್ಯರನ್ನು ನೇಮಿಸಿದವರು ಯಾರು ಎಂದು ಪ್ರಶ್ನಿಸುತ್ತಾ, ಸಮಿತಿಯನ್ನು ಏಕೆ ವಿಸರ್ಜಿಸಬಾರದು ಎಂದು ವಿವರಣೆ ಕೇಳಿದೆ.
ಮಗುವಿನ ವೈದ್ಯಕೀಯ ವರದಿಯನ್ನು ವೈದ್ಯರು ಬದಲಾಯಿಸಿರುವುದನ್ನು ಗಮನಿಸಿದ ನ್ಯಾಯಾಲಯ, ಇದೊಂದು ನಾಚಿಕೆಗೇಡಿನ ಸಂಗತಿ ಎಂದಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಪೋಕ್ಸೊ ನ್ಯಾಯಾಲಯದ ಅಧ್ಯಕ್ಷತೆ ವಹಿಸುವ ಹಿರಿಯ ಮಹಿಳಾ ನ್ಯಾಯಾಂಗ ಅಧಿಕಾರಿಗೆ ಹಸ್ತಾಂತರಿಸುವಂತೆ ಗುರುಗ್ರಾಮ ಜಿಲ್ಲಾ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ
ಗುರುಗ್ರಾಮದ ಸೆಕ್ಟರ್ 54 ರ ಸೊಸೈಟಿಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಇಬ್ಬರು ಮಹಿಳಾ ಮನೆಗೆಲಸದವರು ಮತ್ತು ಪುರುಷ ಸಹಚರರು ಕಳೆದ ಡಿಸೆಂಬರ್ನಿಂದ ಜನವರಿವರೆಗೆ ಸತತ ಎರಡು ತಿಂಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ. ಬಾಲಕಿ ತನ್ನ ತಾಯಿಗೆ ಈ ಬಗ್ಗೆ ತಿಳಿಸಿದ ಬಳಿಕ ಫೆಬ್ರವರಿ 4 ರಂದು ಪೋಷಕರು ದೂರು ನೀಡಿದ್ದರು(ಏಜೆನ್ಸೀಸ್).