ಸಿಎಂ ಆಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ 
ದೇಶ

ಬಿಹಾರದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸಾಮ್ರಾಟ್ ಚೌಧರಿ; ರಾಜ್ಯದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆ | Samrat Chaudhary

ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬುಧವಾರ(ಏ. 15) ಬಿಜೆಪಿ ನಾಯಕ ಮತ್ತು ಮಾಜಿ ಡಿಸಿಎಂ ಸಾಮ್ರಾಟ್ ಚೌಧರಿ(Samrat Chaudhary) ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆ ಹೊಂದಿದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್ಯಸಭೆಗೆ ಆಯ್ಕೆಯಾದ ಬಳಿಕ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಬಳಿಕ ಉತ್ತರಾಧಿಕಾರಿಯಾಗಿ 57 ವರ್ಷದ ಸಾಮ್ರಾಟ್ ಚೌಧರಿ ನೇಮಕಗೊಂಡಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಹಾರ ರಾಜ್ಯಪಾಲರ ಕಚೇರಿ ಲೋಕಭವನದಲ್ಲಿ ಸಿಎಂ ಆಗಿ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕರಿಸಿದ್ರೆ, ಜೆಡಿಯುನ ವಿಜಯ್ ಚೌಧರಿ ಮತ್ತು ಬಿಜೇಂದ್ರ ಯಾದವ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಳೆದ 2 ದಶಕಗಳ ಕಾಲ ಬಿಹಾರದಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಗಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ಸ್ವತಂತ್ರವಾಗಿ ಮತ್ತು ತನ್ನದೇ ನಾಯಕತ್ವದಲ್ಲಿ ಸರ್ಕಾರವನ್ನು ರಚಿಸಿದೆ. ನಿನ್ನೆ ನಡೆದಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮ್ರಾಟ್ ಚೌಧರಿಯನ್ನು ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.

ಜೆಡಿಯುನ ಇಬ್ಬರು ಡಿಸಿಎಂ ಆಗಿ ಪ್ರಮಾಣವಚನ

ಇನ್ನೂ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಯುನ ಹಿರಿಯ ನಾಯಕರಾದ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಕುಮಾರ್ ಚೌಧರಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ನಿತೀಶ್ ಕುಮಾರ್ ಸಿಎಂ ಸ್ಥಾನ ತೊರೆದ ಬಳಿಕ ಅವರ ಪುತ್ರ ನಿಶಾಂತ್ ಕುಮಾರ್ ನೂತನ ಸರ್ಕಾರದಲ್ಲಿ ಡಿಸಿಎಂ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ನಿಶಾಂತ್ ಕುಮಾರ್ ಅವರು ಡಿಸಿಎಂ ಹುದ್ದೆಯನ್ನು ನಿರಾಕರಿಸಿದ್ದು, ಸಾಂಸ್ಥಿಕ ಕೆಲಸಗಳತ್ತ ಗಮನಹರಿಸಲು ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ.
ಕೋಸಿ ಪ್ರದೇಶದ ಸುಪೌಲ್‌ನಿಂದ ಒಂಬತ್ತು ಬಾರಿ ಶಾಸಕರಾಗಿರುವ 79 ವರ್ಷದ ಯಾದವ್ ಮೊದಲ ಡಿಸಿಎಂ ಆಗಿ, ಮತ್ತು ನಿತೀಶ್ ಕುಮಾರ್ ಅವರ ಆಪ್ತ ಎಂದು ಪರಿಗಣಿಸಲಾಗಿರುವ ವಿಜಯ್ ಚೌಧರಿಯವರು ಎರಡನೇ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನೂ ಸರ್ಕಾರ ಸಚಿವ ಸಂಪುಟ ನೇಮಕಾತಿ ಮೇ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್).