ಹೈದರಾಬಾದಿನ ಸಮೋಸಾ ತಯಾರಕ ಘಟಕದ ಮೇಲೆ ದಾಳಿ 
ದೇಶ

ಸಮೋಸಾ ಪ್ರಿಯರೇ ಎಚ್ಚರ: ಹೈದರಾಬಾದ್‌ನಲ್ಲಿ ಬಯಲಾಯ್ತು ಕಲಬೆರಕೆ ದಂಧೆ; 5 ಲಕ್ಷ ಮೌಲ್ಯದ ಸಾಮಾಗ್ರಿ ವಶ | Samosa Raid in Hyderabed

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದಿನ ಸಮೋಸಾ ತಯಾರಕ ಘಟಕದ ಮೇಲೆ ದಾಳಿ
  • ಕೊಳೆತ ಮೊಟ್ಟೆ ಉಪಯೋಗಿಸಿದ ಎಣ್ಣೆ ಬಳಸಿ ಸಮೋಸಾ ತಯಾರಿಸುತ್ತಿದ್ದ ಅಕ್ರಮ ಘಟಕ
  • ಆರೋಗ್ಯ ಸುರಕ್ಷಾ ಅಧಿಕಾರಿಗಳಿಂದ ಸುಮಾರು 5 ಲಕ್ಷ ಮೌಲ್ಯದ ಸಾಮಾಗ್ರಿ ವಶ
ಹೈದರಾಬಾದ್​: ಭಾರತದಲ್ಲಿ ಅಸುರಕ್ಷಿತ ಹಾಗೂ ಕಲಬೆರಿಕೆಯುಕ್ತ ಆಹಾರದ ಪೂರೈಕೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಶುಕ್ರವಾರ (ಮಾರ್ಚ್​ 20) ಹೈದರಾಬಾದಿನಲ್ಲಿ ಅಕ್ರಮವಾಗಿ ಮತ್ತು ಕಲಬೆರಿಕೆಗೊಳಿಸಿ ಸಮೋಸಾ ತಯಾರಿಸುತ್ತಿದ್ದ ಘಟಕದ ಮೇಲೆ ಆರೋಗ್ಯ ಸುರಕ್ಷತೆ ಅಧಿಕಾರಿಗಳು (Samosa Raid in Hyderabed) ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಹೈದರಾಬಾದ್ ಆಹಾರ ಕಲಬೆರಕೆ ಕಣ್ಗಾವಲು ತಂಡ ಹಾಗೂ ಕುಲ್ಸುಂಪುರಾ ಪೊಲೀಸರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಯಾವುದೇ ಮಾನ್ಯತೆ ಪಡೆಯದೆ, ತಿನ್ನಲು ಯೋಗ್ಯವಲ್ಲದ ಕಚ್ಚಾ ವಸ್ತುಗಳನ್ನು ಬಳಸಿ ಸಮೋಸಾ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.

ಹಾಳಾದ ಪದಾರ್ಥ ಬಳಸಿ ಸಮೋಸಾ ತಯಾರಿಕೆ

ದಾಳಿಯ ಸಂದರ್ಭದಲ್ಲಿ ಈ ಘಟಕವು ಅಬ್ದುಲ್ ರಶೀದ್ ಎಂಬುವವನಿಗೆ ಸೇರಿದ್ದಾಗಿದ್ದು, ಈತ ಸಮೋಸಾ ತಯಾರಿಸಲು FSSAI ಪರವಾನಗಿ, ವ್ಯಾಪಾರ ಪರವಾನಗಿ ಅಥವಾ ಅಗ್ನಿಶಾಮಕ ಸುರಕ್ಷತಾ ಅನುಮತಿಯನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ.
ಹಾಗೆಯೇ, ಸ್ಥಳದಲ್ಲಿ ತಯಾರಿಸಲಾಗುತ್ತಿರುವ ಆಹಾರವನ್ನು ಹಾಳಾದ ಮತ್ತು ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತನಿಖಾಧಿಕಾರಿಗಳು ಕಂಡುಹಿಡಿದ್ದಿದ್ದು, ಇದರಲ್ಲಿ ಹಳೆಯ ಬೇಯಿಸಿದ ಮೊಟ್ಟೆ ಮತ್ತು ಅಡುಗೆ ಎಣ್ಣೆ ಸೇರಿಸಿ, ಇವುಗಳನ್ನು ಹಲವು ಬಾರಿ ಮರುಬಳಕೆ ಮಾಡಲಾಗಿದೆ ಎಂದು ಅಧಿಕಾರಿಗಳು ದೃಢಿಕರಿಸಿದ್ದಾರೆ. ಈ ಸ್ಥಳದಲ್ಲಿ  ಅಗತ್ಯ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಮತ್ತು ಇದು ಗ್ರಾಹಕರಿಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

5 ಲಕ್ಷ ಮೌಲ್ಯದ ವಸ್ತು ಜಪ್ತಿ!

ದಾಳಿಯಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಸುಮಾರು 5 ಲಕ್ಷ ಮೌಲ್ಯದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡಿದಿದ್ದಾರೆ ಎಂದು ತಿಳಿದು ಬಂದಿದೆ. ವಿವಿಧ ಪ್ರಕಾರದ ಸಮೋಸಾಗಳು,  ಮೈದಾ ಮತ್ತು ಮೆಕ್ಕೆ ಜೋಳದ ಹಿಟ್ಟು, ಅಡುಗೆ ಎಣ್ಣೆ ಹಾಗೂ ಯಂತ್ರೋಪಕರಣಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್​).