ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್-ಸಾನಿಯಾ ಜೋಡಿ
- ಕ್ರಿಕೆಟ್ ದೇವರ ಮನೆಯಲ್ಲಿ ಮದುವೆ ಸಂಭ್ರಮ
- ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ್ ಸಾನಿಯಾ ಜೋಡಿ
- ಮದುವೆಗೆ ಹರಿದುಬಂದ ಕ್ರಿಕೆಟ್-ಬಾಲಿವುಡ್ ತಾರೆಗಳು
ಮುಂಬೈ: ಕ್ರಿಕೆಟ್ ದೇವರೆಂದೆ ಜನ ಮಾಸನದಲ್ಲಿ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಮತ್ತು ಉದ್ಯಮಿ ಸಾನಿಯಾ ಚಾಂದೋಕ್ ಅವರ ವಿವಾಹವು ಗುರುವಾರ (ಮಾ.5) ಮುಂಬೈನಲ್ಲಿ ನೆರವೇರಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆಯ ವಿಡಿಯೋಗಳು ಭಾರಿ ಸದ್ದು ಮಾಡುತ್ತಿವೆ.
ವೈರಲ್ ವಿಡಿಯೋನಲ್ಲಿ ಅರ್ಜುನ್ ತೆಂಡೂಲ್ಕರ್, ಸಾನಿಯಾ ಚಾಂದೋಕ್ ಅವರಿಗೆ ವರಮಾಲೆಯನ್ನು ಹಾಕಿ, ಪರಸ್ಪರ ತಬ್ಬಿಕೊಳ್ಳುವುದನ್ನು ನೋಡಬಹುದಾಗಿದ್ದು, ಮಗನ ಹಿಂದೆ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಮತ್ತು ಅಕ್ಕ ಸಾರಾ ತೆಂಡೂಲ್ಕರ್ ಸಂತೋಷದಿಂದ ಇರುವುದನ್ನು ಕಾಣಬಹುದು.
ಕಳೆದ ವರ್ಷ ಅಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಅಧಿಕೃತವಾಗಿ ದಂಪತಿಗಳಾಗಿ ಬದಲಾಗಿದ್ದಾರೆ. ಅರ್ಜುನ್ ತೆಂಡೂಲ್ಕರ್ ಒಬ್ಬ ಕ್ರಿಕೆಟ್ ಆಟಗಾರನಾಗಿದ್ದು, ಈ ವರ್ಷದ (2026) ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಇತ್ತ ಸಾನಿಯಾ ಚಾಂದೋಕ್, ಮುಂಬೈನ ಪ್ರತಿಷ್ಟಿತ ಉದ್ಯಮಿ ರವಿ ಘಾಯಿ ಅವರ ಮೊಮ್ಮಗಳಾಗಿದ್ದು, ಚಾಂದೋಕ್ ಮತ್ತು ತೆಂಡೂಲ್ಕರ್ ಕುಟುಂಬ ಬಹುಕಾಲದ ಗೆಳೆಯರೆಂದು ತಿಳಿದು ಬಂದಿದೆ.
ಮದುವೆಯಲ್ಲಿ ಕ್ರಿಕೆಟಿಗರ ಸಂಗಮ
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಮಗನ ಮದುವೆಗೆ ಭಾರತೀಯ ಕ್ರಿಕೆಟ್ ತಂಡದ ದಂಡೇ ಆಗಮಿಸಿದೆ ಎಂದರೆ ತಪ್ಪಾಗದು. ಸದ್ಯ ಟಿ-ಟ್ವೆಂಟಿ ವರ್ಲ್ಡ್ಕಪ್ನಲ್ಲಿ ಬ್ಯುಸಿಯಾಗಿರುವ ಆಟಗಾರರನ್ನು ಹೊರತು ಪಡಿಸಿ ಉಳಿದ ಬಹುತೇಕ ಆಟಗಾರರು ಅರ್ಜುನ್- ಸಾನಿಯಾ ಮದುವೆಯಲ್ಲಿ ಹಾಜರಿದ್ದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಪತ್ನಿ ಸಾಕ್ಷಿ, ಭಾರತ ತಂಡದ ಖ್ಯಾತ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಹಾಜರಿದ್ದರು. ಪ್ರಸ್ತುತ ಐಸಿಸಿ ಮುಖ್ಯಸ್ಥ ಜಯ್ ಶಾ ಕೂಡ ಮದುವೆಗೆ ಆಗಮಿಸಿ ವಧು-ವರರಿಗೆ ಶುಭಕೋರಿದ್ದಾರೆ. ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ನ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ ಕೂಡ ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.
ಮದುವೆಗೆ ಎಂಟ್ರಿ ಕೊಟ್ಟ ಬಾಲಿವುಡ್ ತಾರೆಗಳು
ಕ್ರಿಕೆಟ್ ಮತ್ತು ಬಾಲಿವುಡ್ಗೆ ಅವಿನಾಭಾವ ಸಂಬಂಧವಿದ್ದು, ಈಗ ಅರ್ಜುನ್-ಸಾನಿಯಾ ಮದುವೆಗೆ ಬಾಲಿವುಡ್ನ ತಾರೆಗಳು ಆಗಮಿಸುತ್ತಿದ್ದಾರೆ.ಬಾಲಿವುಡ್ನ ಖ್ಯಾತನಟ ಬೀಗ್ ಬಿ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್ ಹಾಗೂ ಸೊಸೆ ಐಶ್ಚರ್ಯ ರೈ ಬಚ್ಚನ್ ಜೊತೆ ಆಗಮಿಸಿದ್ದಾರೆ. ಬಾಲಿವುಡ್ ನಟ ಮತ್ತು ನಿರ್ದೇಶಕ ಫರಾನ್ ಅಖ್ತರ್, ನೀಲ್ ನಿತಿನ್ ಮುಖೇಶ್, ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಮೊದಲಾದವರು ಈ ಮದುವೆಗೆ ಬಂದು ನವ ಜೋಡಿಗಳಿಗೆ ಶುಭಕೋರಿದ್ದಾರೆ,(ಏಜನ್ಸೀಸ್).