ದೇಶ

ಶಬರಿಮಲೆ ಯಾತ್ರೆ; ಜಿಲ್ಲಾಡಳಿತದಿಂದ ಭಕ್ತರಿಗೆ ಕಟ್ಟುನಿಟ್ಟಿನ ಎಚ್ಚರಿಕೆ: ಪಂಪಾ ನದಿಯಲ್ಲಿ ಬಟ್ಟೆ ಎಸೆದರೆ 5 ಸಾವಿರ ರೂ. ದಂಡ | Sabarimala

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆ ಸಂದರ್ಭದಲ್ಲಿ ಪವಿತ್ರ ಪಂಪಾ ನದಿಯ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಪತ್ತನಂತಿಟ್ಟ ಜಿಲ್ಲಾಡಳಿತವು ಭಕ್ತರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪಂಪಾ ನದಿಯಲ್ಲಿ ಬಟ್ಟೆಗಳನ್ನು ಎಸೆದರೆ ಭಾರೀ ದಂಡ ವಿಧಿಸಿದೆ.

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆ ಸಂದರ್ಭದಲ್ಲಿ ಪವಿತ್ರ ಪಂಪಾ ನದಿಯ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಪತ್ತನಂತಿಟ್ಟ ಜಿಲ್ಲಾಡಳಿತವು ಭಕ್ತರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪಂಪಾ ನದಿಯಲ್ಲಿ ಬಟ್ಟೆಗಳನ್ನು ಎಸೆದರೆ ಭಾರೀ ದಂಡ ವಿಧಿಸಿದೆ.

ಹೊಸ ಆದೇಶದ ಪ್ರಕಾರ, ಪಂಪಾ ನದಿಯಲ್ಲಿ ಬಟ್ಟೆಗಳನ್ನು ಎಸೆದರೆ ಅಥವಾ ನದಿಯನ್ನು ಕಲುಷಿತಗೊಳಿಸಿದರೆ 5,000 ರೂಪಾಯಿಗಳವರೆಗೆ ದಂಡ ವಿಧಿಸಬಹುದು. ನದಿಯ ಪಾವಿತ್ರ್ಯತೆ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಜಿಲ್ಲಾಡಳಿತವು ಭಕ್ತರಲ್ಲಿ ಮನವಿ ಮಾಡಿದೆ.

ಈ ಕುರಿತು ಕೇರಳ ಸಿಎಂ ವಿ.ಡಿ. ಸತೀಶನ್ ಅವರು ಎಕ್ಸ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಶಬರಿಮಲೆ ಮತ್ತು ಪಂಬಾ ಪ್ರದೇಶಗಳನ್ನು ಸ್ವಚ್ಛವಾಗಿಡುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾರೆ. ದಯವಿಟ್ಟು ಪವಿತ್ರ ನದಿಯಲ್ಲಿ ಬಟ್ಟೆ, ಪ್ಲಾಸ್ಟಿಕ್ ಅಥವಾ ಇನ್ನಾವುದೇ ತ್ಯಾಜ್ಯವನ್ನು ಎಸೆಯಬೇಡಿ. ನದಿಯ ಪವಿತ್ರತೆಯನ್ನು ಕಾಪಾಡೋಣ ಮತ್ತು ಮುಂದಿನ ಪೀಳಿಗೆಗಾಗಿ ಅದರ ಶುದ್ಧತೆಯನ್ನು ಉಳಿಸಿಕೊಳ್ಳೋಣ ಎಂದು ಹೇಳಿದ್ದಾರೆ.

ನದಿಯಲ್ಲಿ ಬಟ್ಟೆಗಳನ್ನು ಎಸೆದರೆ 5,000 ರೂ. ದಂಡ

ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ನಡೆಯುವ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ, ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಯ ಭಾಗವಾಗಿ ಪವಿತ್ರ ಪಂಪಾ ನದಿಯಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ, ಅನೇಕ ಭಕ್ತರು ಸ್ನಾನದ ನಂತರ ತಮ್ಮ ಒದ್ದೆ ಬಟ್ಟೆಗಳನ್ನು ಅಲ್ಲೇ ಬಿಟ್ಟುಹೋಗುತ್ತಾರೆ, ಇದು ನದಿಯಲ್ಲಿ ಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ.

ಜಿಲ್ಲಾಡಳಿತದ ಈ ಕುರಿತು ಆದೇಶ ಹೊರಡಿಸಿದ್ದು, ಬಿಎನ್‌ಎಸ್‌ಎಸ್ 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯಿದೆ, 1994ರ ಸೆಕ್ಷನ್ 219N(1) ಮತ್ತು (3)ರ ಅಡಿಯಲ್ಲಿ, ನದಿಯನ್ನು ಕಲುಷಿತಗೊಳಿಸುವ ಮೂಲಕ ಅಥವಾ ಬಟ್ಟೆಗಳು/ತ್ಯಾಜ್ಯವನ್ನು ಎಸೆಯುವ ಮೂಲಕ ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗೆ ತಕ್ಷಣವೇ 5,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ದಂಡದ ಮೊತ್ತವನ್ನು ಹದಿನೈದು ದಿನಗಳ ಒಳಗೆ ಪಾವತಿಸಲು ವಿಫಲವಾದರೆ, ಇತರ ಕಾನೂನು ಕ್ರಮಗಳ ಜೊತೆಗೆ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 279 ಮತ್ತು 'ನೀರು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ, 1974'ರ ಸೆಕ್ಷನ್ 24ರೊಂದಿಗೆ ಓದಿಕೊಳ್ಳಬೇಕಾದ ಸೆಕ್ಷನ್ 43ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ (ಏಜೆನ್ಸೀಸ್).