TMC Rebellion > ಪಠಾಣ್, ಘೋಷ್ ಸೇರಿ 19 ಟಿಎಂಸಿ ಸಂಸದರ ಬಂಡಾಯ!.
TMC Rebellion: ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಎದುರಾಗಿರುವ ಹಿರಿಯ ನಾಯಕರು ಮತ್ತು ಶಾಸಕರ ಭಿನ್ನಮತದಿಂದಾಗಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೊಡ್ಡ ಮಟ್ಟದ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಟಿಎಂಸಿ ಪಕ್ಷದ 19 ರೆಬೆಲ್ ಲೋಕಸಭಾ ಸಂಸದರ ಗುಂಪೊಂದು ಸ್ಪೀಕರ್‌ಗೆ ಸಲ್ಲಿಸಿದೆ ಎನ್ನಲಾದ ರಹಸ್ಯ ಪತ್ರದ ಪ್ರತಿ ಇಂಡಿಯಾ ಟುಡೇಗೆ ಲಭ್ಯವಾಗಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಮೇ 18 ರ ದಿನಾಂಕವಿರುವ ಈ ಪತ್ರದಲ್ಲಿ 19 ಸಂಸದರು ಸಹಿ ಮಾಡಿದ್ದು, ತಾವು ಪ್ರತ್ಯೇಕ ಸಂಸದೀಯ ಬಣವಾಗಿ ಗುರುತಿಸಿಕೊಳ್ಳುವುದಾಗಿ ಮತ್ತು ತಾವೇ ನೈಜ ತೃಣಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸಿ ಪಕ್ಷದ ಅಧಿಕೃತ ಚಿಹ್ನೆಗೆ ಹಕ್ಕು ಮಂಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯಿಂದಾಗಿ ಪಕ್ಷದ ಒಟ್ಟು 28 ಲೋಕಸಭಾ ಸಂಸದರ ಪೈಕಿ ಕೇವಲ ಒಂಬತ್ತು ಸಂಸದರು ಮಾತ್ರ ಸದ್ಯಕ್ಕೆ ರೆಬೆಲ್ ಬಣದಿಂದ ಹೊರಗುಳಿದಂತಾಗಿದೆ, ಆದರೆ ಇನ್ನು ಕೆಲವು ಸದಸ್ಯರ ನಿಖರ ನಿಲುವು ಏನೆಂಬುದು ಸ್ಪಷ್ಟವಾಗಿಲ್ಲ.
ಪತ್ರಕ್ಕೆ ಸಹಿ ಮಾಡಿದವರೆನ್ನಲಾದ ಸಂಸದರ ಪಟ್ಟಿ
ಮೂಲಗಳ ಪ್ರಕಾರ, ಈ ಅತೃಪ್ತ ಸಂಸದರು ತಾವು ಸ್ವತಂತ್ರ ಗುಂಪಾಗಿ ಕಾರ್ಯನಿರ್ವಹಿಸುವುದಾಗಿ ಸ್ಪೀಕರ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಬಂಗಾಳದ ಹಿತಾಸಕ್ತಿಗಳಿಗಾಗಿ ಶ್ರಮಿಸುತ್ತೇವೆ ಎಂದ ರೆಬೆಲ್ಸ್
ಈ ಭಿನ್ನಮತೀಯರ ಗುಂಪು ತಾವು ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟವನ್ನು ಸೇರುವುದಿಲ್ಲ, ಬದಲಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾ ಪಶ್ಚಿಮ ಬಂಗಾಳದ ಹಿತಾಸಕ್ತಿಗಳಿಗಾಗಿ ಶ್ರಮಿಸುವುದಾಗಿ ಸ್ಪಷ್ಟಪಡಿಸಿದೆ. ಜೊತೆಗೆ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಯೋಜಿಸುತ್ತಿರುವ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯ ಮುಂದಿನ ಹೆಜ್ಜೆಗಳನ್ನು ಈ ಬಣವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅಭಿಷೇಕ್ ಬ್ಯಾನರ್ಜಿ ಕಾರ್ಯವೈಖರಿ ಮತ್ತು ಪಕ್ಷದ ಆಡಳಿತದ ಬಗ್ಗೆ ಸಂಸದರಲ್ಲಿ ಮೂಡಿದ ಅಸಮಾಧಾನವೇ ಈ ಬಿಕ್ಕಟ್ಟಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ಸುಮಾರು 60 ಶಾಸಕರು ಪಕ್ಷದಿಂದ ದೂರ ಸರಿದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಸಂಸತ್ತಿನಲ್ಲೂ ಈ ರೀತಿಯ ದಂಗೆ ಎದ್ದಿರುವುದು ಟಿಎಂಸಿಯ 28 ವರ್ಷಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಎನ್ನಲಾಗಿದೆ.
ಈ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ ಸಮಯವು ತಾಂತ್ರಿಕವಾಗಿ ಅತ್ಯಂತ ಪ್ರಮುಖವಾಗಿದೆ. ರೆಬೆಲ್ ಸಂಸದರು ಮೇ 18 ರಂದೇ ಪತ್ರವನ್ನು ಸಲ್ಲಿಸಿದ್ದು, ಅದಾದ ಮರುದಿನ ಅಂದರೆ ಮೇ 19 ರಂದು ಮಮತಾ ಬಣದ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಪಕ್ಷದ ಲೋಕಸಭಾ ಚೀಫ್ ವಿಪ್ ಆಗಿ ನೇಮಿಸಲಾಗಿತ್ತು. ಹೀಗಾಗಿ, ತಾಂತ್ರಿಕ ಮತ್ತು ಪ್ರಕ್ರಿಯೆಗಳ ಆಧಾರದ ಮೇಲೆ ಈ ಭಿನ್ನಮತೀಯ ಗುಂಪಿಗೆ ಮಾನ್ಯತೆ ನೀಡಬಹುದೇ ಎಂಬುದನ್ನು ಸ್ಪೀಕರ್ ಅವರೇ ನಿರ್ಧರಿಸಬೇಕಾಗಿದೆ. ಈ ಬಂಡಾಯವು ಪಕ್ಷದ ಮೇಲಿನ ನಿಯಂತ್ರಣಕ್ಕಾಗಿ ಸುದೀರ್ಘ ಕಾನೂನು ಸಮರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ. ಬಂಡಾಯ ಬಣವು ತಾವು ಬಹುಮತ ಹೊಂದಿರುವುದರಿಂದ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗದ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದ್ದು, ಆಯೋಗ ನೀಡುವ ಯಾವುದೇ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಎರಡೂ ಬಣಗಳು ತುದಿಗಾಲ ಮೇಲೆ ನಿಂತಿವೆ(ಏಜೆನ್ಸೀಸ್).