ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಉಂಟಾದ ಕುಸಿತ ಹಾಗೂ ಅಮೆರಿಕ ಮಧ್ಯಂತರ ಚುನಾವಣೆ ಬೆನ್ನಲ್ಲೇ ಡಾಲರ್ ಮೌಲ್ಯವೂ ಇಳಿದ ಪರಿಣಾಮ ಇದೀಗ ಭಾರತೀಯ ರೂಪಾಯಿ ಮೌಲ್ಯವು ಯುಎಸ್ ಡಾಲರ್ ಎದುರು ಕಳೆದ 6 ತಿಂಗಳಿನಲ್ಲೇ ಅತ್ಯಂತ ಗರಿಷ್ಠ ಮಟ್ಟಕ್ಕೆ (94.06 ರೂ.) ಜಿಗಿತ ಕಂಡಿದೆ.
ಈ ಮೂಲಕ ಏಪ್ರಿಲ್ 23ರಂದು ದಾಖಲಾಗಿದ್ದ 93.99 ದರವನ್ನು ರೂಪಾಯಿ ಮೌಲ್ಯ ದಾಟಿದೆ. ಶುಕ್ರವಾರದ ವಹಿವಾಟಿನಲ್ಲಿ 94.50 ಮಟ್ಟದಲ್ಲಿ ಕನಿಷ್ಠ ಆರಂಭ ಪಡೆದರೂ, ತದನಂತರ ಚೇತರಿಕೆ ಕಂಡು 94.06 ಮಟ್ಟಕ್ಕೆ ತಲುಪಿತು ಎಂದು ಬ್ಲೂಮ್ಬರ್ಗ್ ಅಂಕಿ-ಅಂಶಗಳು ತಿಳಿಸಿವೆ. 'ಫಿನ್ರೆಕ್ಸ್ ಟ್ರೆಜರಿ ಅಡ್ವೈಸರ್ಸ್' ಸಂಸ್ಥೆಯ ಖಜಾನೆ ವಿಭಾಗದ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ಮಾತನಾಡಿ, ಅಮೆರಿಕದ ಮಧ್ಯಂತರ ಚುನಾವಣಾ ಫಲಿತಾಂಶಗಳ ಬೆನ್ನಲ್ಲೇ ಯುಎಸ್ ಡಾಲರ್ ಇಂಡೆಕ್ಸ್ ಮೌಲ್ಯ ಕುಸಿದಿದೆ ಎಂದು ತಿಳಿಸಿದ್ದಾರೆ.
ಜಾಗತಿಕವಾಗಿ ಕಚ್ಚಾ ತೈಲ ದರದಲ್ಲಿ ತೀವ್ರ ಕಡಿತ ಉಂಟಾಗಿರುವುದು ಹಾಗೂ ದೇಶೀಯ ಮಾರುಕಟ್ಟೆಗೆ ವಿದೇಶಿ ಬಂಡವಾಳ ಹೂಡಿಕೆದಾರರ ಹರಿವು ಹೆಚ್ಚಾಗಿರುವುದು ರೂಪಾಯಿ ಮೌಲ್ಯ ಬಲಗೊಳ್ಳಲು ಪ್ರಮುಖ ಕಾರಣ. ಇದೇ ವೇಳೆ, ಬ್ರೆಂಟ್ ಕಚ್ಚಾ ತೈಲ ಬೆಲೆಯು ಶೇ.1.4ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 99.7 ಡಾಲರ್ ತಲುಪಿದರೆ, ಡಬ್ಲ್ಯೂಟಿಐ ಕಚ್ಚಾ ತೈಲ ಶೇ.1.05ರಷ್ಟು ಏರಿಕೆಯಾಗಿ 91.4 ಡಾಲರ್ ತಲುಪಿದೆ.
ಇತ್ತ ಭಾರತೀಯ ಸರ್ಕಾರಿ ಬಾಂಡ್ಗಳ ದರವು ಸತತ ನಾಲ್ಕನೇ ದಿನವೂ ಏರಿಕೆ ಕಂಡಿದ್ದು, ಬೆಂಚ್ಮಾರ್ಕ್ ಬಾಂಡ್ ಇಳುವರಿಯು ಶೇ.7.17 ಮಟ್ಟದಲ್ಲಿ ಸ್ಥಿರವಾಗಿದೆ. ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಕಡಿತ ಹಾಗೂ ವಿದೇಶಿ ಬಂಡವಾಳ ಹರಿವು ಮುಂದುವರಿದರೆ ರೂಪಾಯಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಇದಾದರೂ, ಆಮದುದಾರರಿಂದ ಡಾಲರ್ಗೆ ಇರುವ ಭಾರಿ ಬೇಡಿಕೆಯು ರೂಪಾಯಿಯ ಅತಿಯಾದ ಏರಿಕೆಯನ್ನು ಹತೋಟಿಗೆ ತರಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).