Sanjay Raut | ರಾಜ್ಯಸಭಾ ಸದಸ್ಯ ಸಂಜಯ್ ರಾವತ್ 
ದೇಶ

ಸಂಸದರ ಖರೀದಿಗೆ 50 ಕೋಟಿ ರೂ ಆಫರ್, ಪ್ರೈವೇಟ್ ಜೆಟ್ ರೆಡಿ!..ಇದು ಅಸಹ್ಯಕರ ಎಂದು ಆಕ್ರೋಶ ಹೊರಹಾಕಿದ ಸಂಜಯ್​ ರಾವತ್​ | Sanjay Raut

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಶಿವಸೇನಾ (ಯುಬಿಟಿ) ಸಂಸದರನ್ನು ಖರೀದಿಸಲು ತಲಾ 50 ಕೋಟಿ ರೂಪಾಯಿ ಆಫರ್ ನೀಡಲಾಗಿದ್ದು, ಈಗಾಗಲೇ 15 ಕೋಟಿ ರೂ. ಮುಂಗಡ ಹಣ ಪಾವತಿಸಲಾಗಿದೆ. ಅಷ್ಟೇ ಅಲ್ಲದೆ, ಸಂಸದರನ್ನು ದೆಹಲಿಗೆ ಕರೆದೊಯ್ಯಲು ಮಂಗಳವಾರ ರಾತ್ರಿಯೇ ನಾಂದೇಡ್ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಮೂರು ವಿವಿಧ ಸ್ಥಳಗಳಿಗೆ ಮೂರು ವಿಶೇಷ ಖಾಸಗಿ ವಿಮಾನಗಳನ್ನು ಕಳುಹಿಸಲಾಗಿತ್ತು ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ (Sanjay Raut) ಗಂಭೀರ ಆರೋಪ ಮಾಡಿದ್ದಾರೆ.
ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ರಿಂದ 7 ಸಂಸದರು ಬಂಡಾಯ ಸಾರಿದ್ದು, ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ. ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ರಾವತ್, ಅಪ್ನಾ ಸಪ್ನಾ ಮನಿ... ಮನಿ! ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು ರಾತ್ರೋ ರಾತ್ರಿ 15 ಕೋಟಿ ರೂ. ಅಡ್ವಾನ್ಸ್ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ಇದು ಅತ್ಯಂತ ಆಘಾತಕಾರಿ ಮತ್ತು ಅಸಹ್ಯಕರ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂಸದರ ನಿಷ್ಠೆಯ ಬಗ್ಗೆ ಆತಂಕ ಎದುರಾಗುತ್ತಿದ್ದಂತೆ, ಶಿವಸೇನಾ (ಯುಬಿಟಿ) ತನ್ನೆಲ್ಲಾ ಸಂಸದರಿಗೆ ನವದೆಹಲಿಯಲ್ಲಿ ನಡೆಯಲಿರುವ ತುರ್ತು ಸಭೆಗೆ ಹಾಜರಾಗುವಂತೆ ವಿಪ್ ಜಾರಿಗೊಳಿಸಿದೆ. ಸಭೆಗೆ ಗೈರಾಗುವ ಸಂಸದರ ವಿರುದ್ಧ ಅನರ್ಹತೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಕ್ಷದ ಮೂಲಗಳು ಎಚ್ಚರಿಸಿವೆ. ಈ ಬೆಳವಣಿಗೆಯು 2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯವನ್ನು ಮತ್ತೆ ನೆನಪಿಸುವಂತಿದೆ.

ಭಿನ್ನಮತಕ್ಕೆ ಕಾರಣವೇನು..?

ಶಿಂಧೆ ಬಣದ ಮೂಲಗಳ ಪ್ರಕಾರ, ಪಕ್ಷದಲ್ಲಿ ಆದಿತ್ಯ ಠಾಕ್ರೆ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ತಯಾರಿ ನಡೆದಿರುವುದೇ ಈ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜೂನ್ 19 ರಂದು ನಡೆಯಲಿರುವ ಶಿವಸೇನೆಯ 60ನೇ ಸಂಸ್ಥಾಪನಾ ದಿನಾಚರಣೆಯಂದು ಆದಿತ್ಯ ಠಾಕ್ರೆಗೆ ಪಕ್ಷದಲ್ಲಿ ಬಡ್ತಿ ನೀಡುವ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಯಿದ್ದು, ಇದಕ್ಕೆ ಕೆಲವು ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಶಿಂಧೆ ಬಣದವರು ಹೇಳೋದೇನು..?

ಇದೇ ವೇಳೆ ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ನಾಯಕ್ ಮಾತನಾಡಿ, ಜನಪ್ರತಿನಿಧಿಗಳಿಗೆ ತಮ್ಮ ನಾಯಕತ್ವದ ಮೇಲೆ ನಂಬಿಕೆ ಇಲ್ಲದಿದ್ದರೆ ಮತ್ತು ಅವರು ಬಾಳಾಸಾಹೇಬ್ ಠಾಕ್ರೆ ಅವರ ಆದರ್ಶ ಹಾಗೂ ಏಕನಾಥ್ ಶಿಂಧೆ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವುದಾದರೆ, ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಉದ್ಧವ್ ಠಾಕ್ರೆ ಕರೆದಿದ್ದ ಸಭೆಗೆ ಗೈರಾಗಿದ್ದ ಸಂಸದ ಸಂಜಯ್ ದೇಶ್‌ಮುಖ್ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿಯಾಗಿರುವುದು ಸಂಸದರ ಪಕ್ಷಾಂತರದ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

'ಮಾತೋಶ್ರೀ' ಸಭೆಗೆ ಐದು ಸಂಸದರ ಗೈರು

ಇತ್ತೀಚೆಗೆ ಉದ್ಧವ್ ಠಾಕ್ರೆ ಅವರು ತಮ್ಮ ಮಾತೋಶ್ರೀ ನಿವಾಸದಲ್ಲಿ ಕರೆದಿದ್ದ ಪ್ರಮುಖ ಸಭೆಗೆ 9 ಸಂಸದರ ಪೈಕಿ 5 ಸಂಸದರು ಬಾರದೇ ಇರುವುದು ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸಭೆಗೆ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ಸಂಜಯ್ ದಿನಾ ಪಾಟೀಲ್ ಮತ್ತು ರಾಜಾಭೌ ವಾಜೆ ಮಾತ್ರ ಖುದ್ದಾಗಿ ಬಂದಿದ್ದರು. ಆದರೆ, ಸಂಜಯ್ ಜಾಧವ್, ಸಂಜಯ್ ದೇಶ್‌ಮುಖ್, ಓಮ್ರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ನಾಗೇಶ್ ಪಾಟೀಲ್ ಅಷ್ಟೀಕರ್ ಸಭೆಗೆ ಹಾಜರಾಗಿರಲಿಲ್ಲ. ಆ ಐದು ಸಂಸದರು ವರ್ಚುವಲ್​ (ಆನ್‌ಲೈನ್) ಮೂಲಕ ಸಭೆಗೆ ಜಾಯಿನ್ ಆಗಿದ್ದರು ಎಂದು ಪಕ್ಷ ಸಮರ್ಥಿಸಿಕೊಂಡಿದೆ.
ಸಭೆಗೆ ಬಾರದೇ ಇದ್ದ ಐದು ಸಂಸದರ ಪೈಕಿ ಭೌಸಾಹೇಬ್ ವಾಕಚೌರೆ ಮಂಗಳವಾರ ಮಾತನಾಡಿ, ತಾವು ಉದ್ಧವ್ ಠಾಕ್ರೆ ಅವರೊಂದಿಗೇ ಇರುವುದಾಗಿ ಹೇಳುತ್ತಾ, ನಾಳೆಯ ದಿನ ಏನಾಗುತ್ತದೋ ನನ್ನನ್ನು ಕೇಳಬೇಡಿ ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ. ಇದಕ್ಕಿಂತ ಒಂದು ದಿನ ಮುಂಚೆ, ಇದೇ ಐದು ಸಂಸದರು ಆದಿತ್ಯ ಠಾಕ್ರೆ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಕೂಡ ಬಂದಿರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ(ಏಜೆನ್ಸೀಸ್​​).