ನೋಯ್ಡಾ: ಕಷ್ಟಪಟ್ಟು ಬೆವರು ಸುರಿಸಿ ದುಡಿದು ಕೂಡಿಟ್ಟ ಹಣ ಬ್ಯಾಂಕ್ನಲ್ಲಿಟ್ಟರೆ ಸುರಕ್ಷಿತವಾಗಿರುತ್ತೆ ಎನ್ನವುದು ಪ್ರತಿಯೊಬ್ಬ ಭಾರತೀಯನ ನಂಬಿಕೆ. ಆದರೆ, ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶಾಖೆಯೊಂದರಲ್ಲಿ ನಡೆದಿರುವ ಕೃತ್ಯ ಈಗ ಜನರ ಆತಂಕಕ್ಕೆ ಕಾರಣವಾಗಿದೆ.
ಗ್ರೇಟರ್ ನೋಯ್ಡಾದ ಐಚಾರ್ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಗ್ರಾಹಕರ ಅನುಮತಿ ಇಲ್ಲದೆ ಫಿಕ್ಸ್ಡ್ ಡಪಾಸಿಟ್ (FD) ಹಾಗೂ ಉಳಿತಾಯ ಖಾತೆಯಿಂದ ಸರಿಸುಮಾರು 35 ಕೋಟಿಗೂ ಹೆಚ್ಚಿನ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹನೀಫ್ ಖಾನ್ ಎಂಬ ಗ್ರಾಹಕ, "ನನ್ನ ಖಾತೆಯಲ್ಲಿ 39 ಲಕ್ಷ ರೂಪಾಯಿ ಇತ್ತು. ನಾನಂತೂ ಯಾರಿಗೂ ಹಣ ಕಳಿಸಿಲ್ಲ, ಯಾವುದೇ ಚೆಕ್ ಅಥವಾ ಡಾಕ್ಯುಮೆಂಟ್ಗೆ ಸಹಿ ಹಾಕಿಲ್ಲ. ಆದರೂ ಖಾತೆಯಲ್ಲಿ ನಯಾಪೈಸೆ ಉಳಿದಿಲ್ಲ" ಎಂದು ಕಣ್ಣೀರಿಟ್ಟಿದ್ದಾರೆ. ಒಂದು ರೂಪಾಯಿ ಹಣ ಕಟ್ ಆದರೂ ಮೊಬೈಲ್ಗೆ ಬರುವ ಎಸ್ಎಂಎಸ್ ಈ ಬಾರಿ ಲಕ್ಷಾಂತರ ರೂಪಾಯಿ ಮಾಯವಾದಾಗ ಬರಲೇ ಇಲ್ಲ ಎಂದಿದ್ದಾರೆ.
ಜೆವಾರ್ ವಿಮಾನ ನಿಲ್ದಾಣ ಮತ್ತು ಹೆದ್ದಾರಿ ಯೋಜನೆಗಳಿಗಾಗಿ ಜಮೀನು ಬಿಟ್ಟುಕೊಟ್ಟು, ಸರ್ಕಾರದಿಂದ ಪರಿಹಾರ ಪಡೆದಿದ್ದ ರೈತರೇ ಈ ಗೋಲ್ಮಾಲ್ನಲ್ಲಿ ಹೆಚ್ಚು ಬಲಿಯಾಗಿದ್ದಾರೆ. ವಿಜೇಂದ್ರ ಸಿಂಗ್ ಎಂಬ ರೈತನ ಖಾತೆಯಲ್ಲಿ ಸರ್ಕಾರ ನೀಡಿದ್ದ 88 ಲಕ್ಷ ರೂಪಾಯಿ ಪರಿಹಾರದ ಹಣವಿತ್ತು. ಆದರೆ ಬ್ಯಾಂಕ್ಗೆ ಹೋಗಿ ನೋಡಿದಾಗ ಕೇವಲ 1 ಲಕ್ಷ ರೂಪಾಯಿ ಮಾತ್ರ ಉಳಿದಿದೆ. ಇನ್ನು ಝಕೀರ್ ಎಂಬುವವರ ಖಾತೆಯಿಂದ 9.5 ಲಕ್ಷ ರೂಪಾಯಿ ಎಗರಿಸಲಾಗಿದೆ.
ಬಿರೋಂಡಾ ಗ್ರಾಮದ 60 ವರ್ಷದ ಸಂತೋಷ್ ಎಂಬ ಮಹಿಳೆ ರಸ್ತೆ ಬದಿಯಲ್ಲಿ ಟೀ-ಸಮೋಸಾ ಮಾರಿ ಬದುಕುತ್ತಿದ್ದ ಈ ವೃದ್ಧೆಯ ಜಮೀನನ್ನು ವಿಮಾನ ನಿಲ್ದಾಣ ಯೋಜನೆಗೆ ವಶಪಡಿಸಿಕೊಂಡಾಗ 1.29 ಕೋಟಿ ರೂಪಾಯಿ ಪರಿಹಾರ ಸಿಕ್ಕಿತ್ತು. ಭವಿಷ್ಯದ ಆಸರೆಯಾಗಿ ಪಿಎನ್ಬಿ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರು. ಇತ್ತೀಚೆಗೆ ಇವರ ಮಗ ಹಣ ಡ್ರಾ ಮಾಡಲು ಹೋದಾಗ ಶಾಕ್ ಖಾತೆಯಲ್ಲಿದ್ದ 1.18 ಕೋಟಿ ರೂಪಾಯಿ ಮಾಯವಾಗಿದೆ. ರೊಚ್ಚಿಗೆದ್ದ ಈ ಅಸಹಾಯಕ ವೃದ್ಧೆ ತನ್ನ ಸಹೋದರಿಯೊಂದಿಗೆ ಬ್ಯಾಂಕ್ ಎದುರೇ ಧರಣಿ ಕುಳಿತ ಎಲ್ಲಡೆ ವೈರಲ್ ಆಗುತ್ತಿದೆ.
ಯಾವುದೇ ಖಾತೆಯಿಂದ ಹಣ ಹೊರಹೋಗಬೇಕಾದರೆ ಒಟಿಪಿ (OTP) ಅಥವಾ ಎಸ್ಎಂಎಸ್ ಬರಲೇಬೇಕು. ಆದರೆ ಈ ಪ್ರಕರಣದಲ್ಲಿ ಉಳಿತಾಯ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ಗಳೆರಡರಿಂದಲೂ ಸದ್ದಿಲ್ಲದೆ ಹಣ ಬೇರೆಡೆ ವರ್ಗಾವಣೆಯಾಗಿದೆ. ಬ್ಯಾಂಕಿನ ಒಳಗಿನವರ ಸಹಾಯವಿಲ್ಲದೆ ಇಂಥ ಹೈಟೆಕ್ ವಂಚನೆ ಅಸಾಧ್ಯ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ವಂಚನೆ ಬೆಳಕಿಗೆ ಬರುತ್ತಿದ್ದಂತೆ ನೂರಾರು ಖಾತೆದಾರರು ಬ್ಯಾಂಕ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪಿಎನ್ಬಿ ಆಡಳಿತ ಮಂಡಳಿ ಶಾಖಾ ವ್ಯವಸ್ಥಾಪಕ ಸೇರಿದಂತೆ ಹಲವು ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಹಾಗೂ ಬ್ಯಾಂಕಿನ ಉನ್ನತ ಆಡಿಟ್ ತಂಡ ತನಿಖೆ ಆರಂಭಿಸಿದೆ. ಬಡವರ, ರೈತರ ಬೆವರಿನ ಹಣವನ್ನು ಲೂಟಿ ಮಾಡಿದ ಕಿಲಾಡಿಗಳು ಯಾರು, 35 ಕೋಟಿ ರೂಪಾಯಿ ಯಾರ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಅಸಲಿ ಸತ್ಯ ಹೊರಬರಬೇಕಿದೆ, (ಏಜೆನ್ಸೀಸ್).