Rohit Sharma | ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ
ಮುಂಬೈ: ಮುಂಬರುವ 2027ರ ಏಕದಿನ ವಿಶ್ವಕಪ್ ಆಯ್ಕೆಯ ಕುರಿತು ತಿಂಗಳುಗಳಿಂದ ನಡೆಯುತ್ತಿದ್ದ ಊಹಾಪೋಹಗಳ ನಂತರ, ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಕೊನೆಗೂ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.
ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್‌ನಲ್ಲಿ ಪ್ರೇಕ್ಷಕರೊಬ್ಬರು 2027ರ ವಿಶ್ವಕಪ್ ಭಾಗವಹಿಸುವಿಕೆಯ ಬಗ್ಗೆ ಕೇಳಿದಾಗ ಹಿಟ್ಮ್ಯಾನ್, 2027ರ ಅಕ್ಟೋಬರ್ ಇನ್ನು ಬಹಳ ದೂರವಿದೆ, ಅದರ ಬಗ್ಗೆ ಆಗ ನೋಡೋಣ ಎಂದಿದ್ದಾರೆ. ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ತಾವು ಆಡುತ್ತಾರಾ..? ಎಂಬ ಪ್ರಶ್ನೆಗೆ ರೋಹಿತ್ ಒಂದೇ ಸಾಲಿನ ಉತ್ತರ ನೀಡಿದ್ದಾರೆ.
2027ರ ಏಕದಿನ ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿವೆ. ಭಾರತ ತಂಡ ವಿಶ್ವಕಪ್ ಗೆದ್ದರೆ, 2024 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ ರೋಹಿತ್ ನೇತೃತ್ವದ ತಂಡವು ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಿದಂತೆ, ಅಭಿಮಾನಿಗಳೊಂದಿಗೆ ಸಂಭ್ರಮಿಸಲು ಓಪನ್ ಬಸ್ ಪೆರೇಡ್ ಇರಲಿದೆಯೇ ಎಂದೂ ಅವರನ್ನು ಕೇಳಲಾಯಿತು. ಅದಕ್ಕೆ ರೋಹಿತ್, ಈಗ ಬಸ್ ಪೆರೇಡ್ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಉತ್ತರಿಸಿದರು.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತದ ಈ ದಿಗ್ಗಜ ಬ್ಯಾಟರ್ ಕುರಿತು ಯಾವುದೇ ಊಹಾಪೋಹಗಳಿಗೆ ಆಸ್ಪದವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಭಾರತ ಪರ ಆಡಿದ ಕೊನೆಯ ಏಕದಿನ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದ್ದರು ಎಂದು ಹೇಳಿದರು. ರೋಹಿತ್ ಎಲ್ಲಾ ಪಂದ್ಯಗಳಲ್ಲೂ ಅದ್ಭುತವಾಗಿ ಆಡುತ್ತಿದ್ದಾರೆ. ಹಾಗಿದ್ದ ಮೇಲೆ ನಿಮಗೇನು ಬೇಕು...? ಕೊನೆಯ ಪಂದ್ಯದಲ್ಲಿ (ಇಂಗ್ಲೆಂಡ್ ವಿರುದ್ಧ), ಅವರು 138 ರನ್‌ಗಳನ್ನು ಗಳಿಸಿದರು, ಹೀಗಿರುವಾಗ ಊಹಾಪೋಹಗಳು ಏಕೆ..? ಊಹಾಪೋಹ ಮಾಡುವವರಿಗೆ ನಾನು ಯಾವುದೇ ಆಹಾರ ನೀಡಲು ಬಯಸುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ನಡೆದ ಬಿಸಿಸಿಐ ಪರಾಮರ್ಶೆ ಸಭೆಯ ನಂತರ ಸೈಕಿಯಾ ಸುದ್ದಿಗಾರರಿಗೆ ತಿಳಿಸಿದ್ದರು(ಏಜೆನ್ಸೀಸ್).