Ajit Pawar Plane Crash | ಅಜಿತ್ ಪವಾರ್ ಸಾವಿಗೆ ಕಾರಣವಾದ ಭೀಕರ ವಿಮಾನ ಅಪಘಾತದ ಬಗ್ಗೆ ರೋಹಿತ್ ಪವಾರ್ ಅನುಮಾನ 
ದೇಶ

ಮರಗಳೇ ಇಲ್ಲದ ಜಾಗದಲ್ಲಿ ಡಿಕ್ಕಿ ಆಗಿದ್ದು ಹೇಗೆ..? ತನಿಖಾ ಸಂಸ್ಥೆಗಳ ವಿರುದ್ಧ ರೋಹಿತ್ ಪವಾರ್ ಗಂಭೀರ ಆರೋಪ! | Ajit Pawar Plane Crash

ಮುಂಬೈ: ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಕಾರಣವಾದ ಭೀಕರ ವಿಮಾನ ಅಪಘಾತದ (Ajit Pawar Plane Crash) ತನಿಖೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಗಂಭೀರ ಆರೋಪ ಮಾಡಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿಯು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಕಿಡಿಕಾರಿದ್ದಾರೆ.
ಮರಗಳೇ ಇಲ್ಲದ ಜಾಗದಲ್ಲಿ ಡಿಕ್ಕಿ?: ಅಪಘಾತದ ಸ್ಥಳದಲ್ಲಿ ಯಾವುದೇ ಮರಗಳಿಲ್ಲದಿದ್ದರೂ, ವಿಮಾನವು ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಲ್ಲಿ ಹೇಳಿರುವುದನ್ನು ರೋಹಿತ್ ಪ್ರಶ್ನಿಸಿದ್ದಾರೆ. ಅಲ್ಲಿರುವುದು ಕೇವಲ ಸಣ್ಣ ಪೊದೆಗಳು, ಅವುಗಳನ್ನು ವಿಮಾನ ಸ್ಪರ್ಶಿಸಿಯೇ ಇಲ್ಲ ಎನ್ನವುದು ಅವರ ವಾದ.
ವಿಮಾನವು ಬಲಕ್ಕೆ ಓರೆಯಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದರೆ, ಲಭ್ಯವಿರುವ ವಿಡಿಯೋ ದೃಶ್ಯಗಳಲ್ಲಿ ವಿಮಾನ ಎಡಕ್ಕೆ ವಾಲುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ದಿಕ್ಕಿನ ಬಗ್ಗೆಯೇ ಸರಿಯಾದ ಮಾಹಿತಿ ನೀಡದ ವರದಿಯನ್ನು ನಂಬುವುದು ಹೇಗೆ? ಎನ್ನುವುದು ರೋಹಿತ್​​ ಪ್ರಶ್ನೆ.

ಬ್ಲ್ಯಾಕ್​ ಬಾಕ್ಸ್

ವಿಮಾನದ ಬ್ಲ್ಯಾಕ್​ ಬಾಕ್ಸ್​ ನಾಶವಾಗಿದೆ ಎಂಬ ವರದಿಗಳ ಬಗ್ಗೆ ರೋಹಿತ್ ಪವಾರ್ ಅನುಮಾನ ವ್ಯಕ್ತಪಡಿಸಿದ್ದು, ಸುಮಾರು 1,100 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಥವಾ ತೀವ್ರ ಒತ್ತಡಕ್ಕೆ ಒಡ್ಡಿಕೊಳ್ಳದ ಹೊರತು ಬ್ಲ್ಯಾಕ್​ ಬಾಕ್ಸ್​ ಹಾನಿಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಮಾನದ ರಚನೆಯು ಸುಮಾರು 635 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಬಹುದಾದರೂ, ಬ್ಲ್ಯಾಕ್​ ಬಾಕ್ಸ್​ನ್ನು ಎಂತಹ ಪರಿಸ್ಥಿತಿಗಳಲ್ಲೂ ಏನು ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವಿಮಾನವು 35 ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು ಎಂದು ವರದಿಯಾಗಿದ್ದರೂ, ಪ್ರಸ್ತುತ ಅದರ ಮೌಲ್ಯ 10–15 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಆದರೂ ಕೂಡ ಅದನ್ನು 210 ಕೋಟಿ ರೂಪಾಯಿಗಳಿಗೆ ವಿಮೆ ಮಾಡಲಾಗಿತ್ತು. ಮುಖ್ಯ ಪೈಲಟ್ ಭಾಗಿಯಾಗಿದ್ದಾರೆಯೇ ಮತ್ತು ಯಾವುದೇ ಆರ್ಥಿಕ ಉದ್ದೇಶವಿದೆಯೇ ಎಂದು ಪವಾರ್ ಪ್ರಶ್ನಿಸಿದರು(ಏಜೆನ್ಸೀಸ್​).