ಹರಿಯಾಣದ ಮುರ್ಥಲ್ ಧಾಬಾದಲ್ಲಿ ರೋಬೋಟ್ ವೇಟರ್ ಕಮಾಲ್!
ಹರಿಯಾಣ: ಹರಿಯಾಣದ ಪ್ರಸಿದ್ಧ ಮುರ್ಥಲ್ ಫುಡ್ ಜಾಯಿಂಟ್ ಎಂದರೆ ಎಲ್ಲರಿಗೂ ಅಲ್ಲಿ ದೊರೆಯುವ ಬಿಸಿ-ಬಿಸಿ ಪರಾಟಾ, ಅದರ ಮೇಲಿಟ್ಟ ಬೆಣ್ಣೆ ಹಾಗು ತಣ್ಣನೆಯ ಲಸ್ಸಿ ನೆನಪಿಗೆ ಬರುತ್ತದೆ.
ದೆಹಲಿ-ಚಂಡೀಘಢ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಆಹಾರ ಪ್ರಿಯರೂ ಇಲ್ಲಿನ ಧಾಬಾಗಳ ರುಚಿ ನೋಡಲು ಖಂಡಿತ ನಿಲ್ಲುತ್ತಾರೆ. ಆದರೆ, ಈಗ ಇಲ್ಲಿನ ಅನುಭವ ಸಂಪೂರ್ಣ ಬದಲಾಗಿದೆ ಎಂದರೆ ನೀವು ನಂಬಲೇ ಬೇಕು.
ಹೌದು, ಸಾಂಪ್ರದಾಯಿಕ ಶೈಲಿಗೆ ಹೆಸರುವಾಸಿಯಾಗಿರುವ ಮುರ್ಥಲ್‌ನಲ್ಲಿ ಈಗ ಹೈಟೆಕ್ ಕ್ರಾಂತಿ ಆರಂಭವಾಗಿದೆ. ಇಲ್ಲಿನ ರೇಷಮ್ ಧಾಬಾ ತನ್ನ ಗ್ರಾಹಕರಿಗೆ ಊಟ ಬಡಿಸಲು ಮನುಷ್ಯರ ಬದಲು ರೋಬೋಟ್ ವೇಟರ್ (Robot Waiter in Dhaba) ಅನ್ನು ಕಣಕ್ಕಳಿಸಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಟೇಬಲ್‌ಗೆ ಬಂದು ತಲುಪುವ ಸಮೋಸಾ, ಪರೋಟಾ
ಸಾಮಾನ್ಯವಾಗಿ ರೋಬೋಟ್‌ಗಳು ದೊಡ್ಡ ದೊಡ್ಡ ಟೆಕ್ ಕಂಪನಿಗಳಲ್ಲಿ ಅಥವಾ ಮಾಲ್‌ಗಳಲ್ಲಿ ಕಾಣಸಿಗುತ್ತವೆ. ಆದರೆ ಹೆದ್ದಾರಿಯ ಧಾಬಾವೊಂದರಲ್ಲಿ ರೋಬೋಟ್ ತಿಂಡಿ ಹೊತ್ತುಕೊಂಡು ಬಂದರೆ ಹೇಗಿರುತ್ತದೆ? ರೇಷಮ್ ಧಾಬಾದಲ್ಲಿ ಈಗ ಇದೇ ವಿಸ್ಮಯ ನಡೆಯುತ್ತಿದೆ. ಅಡುಗೆ ಮನೆಯಲ್ಲಿ ಆರ್ಡರ್ ಸಿದ್ಧವಾದ ತಕ್ಷಣ, ಆ ಬಿಸಿಬಿಸಿ ಆಹಾರದ ತಟ್ಟೆಯನ್ನು ರೋಬೋಟ್‌ನ ಟ್ರೇ ಮೇಲೆ ಇಡಲಾಗುತ್ತದೆ.
ಮುಂದೆ ಈ ಯಂತ್ರ ತನ್ನಲ್ಲಿರುವ ವಿಶೇಷ ನ್ಯಾವಿಗೇಷನ್ ಸಿಸ್ಟಮ್ ಸಹಾಯದಿಂದ ನೇರವಾಗಿ ನಿಗದಿಪಡಿಸಿದ ಟೇಬಲ್ ಬಳಿಗೆ ಸಾಗುತ್ತದೆ. ಫೈಬರ್‌ನಿಂದ ನಿರ್ಮಿಸಲಾದ ಈ ರೋಬೋಟ್‌ನ ಕಣ್ಣುಗಳಲ್ಲಿ ಮಿನುಗುವ ಕೆಂಪು ಎಲ್‌ಇಡಿ ದೀಪಗಳು ಗ್ರಾಹಕರಿಗೆ ಒಂದು ಸಿನಿಮಾ ಲೋಕದ ಅನುಭವವನ್ನು ನೀಡುತ್ತಿವೆ.
ಅದರಲ್ಲೂ ಧಾಬಾಗೆ ಬರುವ ಚಿಕ್ಕ ಮಕ್ಕಳು ಈ ಯಂತ್ರವನ್ನು ನೋಡಿ ಖುಷಿಯಿಂದ ಜಿಗದಾಡುತ್ತಿದ್ದಾರೆ. ಫೋಟೋ ಹಾಗೂ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಬೆಂಗಳೂರು ಕನೆಕ್ಷನ್ ಮತ್ತು ವಿಶೇಷತೆಗಳು!
ಈ ಅದ್ಭುತ ರೋಬೋಟ್ ಅನ್ನು ಬೆಂಗಳೂರು ಮೂಲದ ತಂತ್ರಜ್ಞರ ವಿಶೇಷ ತಂಡದ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್ ಸಂಪೂರ್ಣವಾಗಿ ಸಾಫ್ಟ್‌ವೇರ್ ಚಿಪ್ ಮತ್ತು ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ.
ಇದರ ಚಲನವಲನಗಳನ್ನು ಗಮನಿಸಲು ಹಾಗೂ ಅಗತ್ಯವಿದ್ದಾಗ ನಿಯಂತ್ರಿಸಲು ಧಾಬಾದಲ್ಲಿ ಪ್ರತ್ಯೇಕ ಸಿಬ್ಬಂದಿಯನ್ನು ಸಹ ನೇಮಿಸಲಾಗಿದೆ. ಒಮ್ಮೆ ಬ್ಯಾಟರಿ ಪೂರ್ಣವಾಗಿ ಚಾರ್ಜ್ ಆದರೆ, ಇದು ಸುಮಾರು ಒಂದೂವರೆ ಯಿಂದ ಎರಡು ಗಂಟೆಗಳ ಕಾಲ ನಿರಂತರವಾಗಿ ಸೇವೆ ನೀಡಬಲ್ಲ ಸಾಮರ್ಥ್ಯ ಹೊಂದಿದೆ.
ಉದ್ಯೋಗಕ್ಕೆ ಕುತ್ತಿಲ್ಲ, ಮನರಂಜನೆಗೆ ಮಾತ್ರ!
ಅನೇಕರಿಗೆ ರೋಬೋಟ್‌ಗಳು ಬಂದರೆ ನೌಕರರ ಕೆಲಸ ಹೋಗಬಹುದೆಂಬ ಆತಂಕವಿರುತ್ತದೆ. ಆದರೆ ರೇಷಮ್ ಧಾಬಾದ ನಿರ್ವಹಣೆ ಮಾಡುತ್ತಿರುವ ಮ್ಯಾನೇಜರ್ ಸಂಜಯ್ ಸ್ಪಷ್ಟಪಡಿಸಿರುವಂತೆ, ಈ ರೋಬೋಟ್ ಮಾನವ ಸಿಬ್ಬಂದಿಯನ್ನು ಬದಲಾಯಿಸುವ ಉದ್ದೇಶದಿಂದ ಬಂದಿದ್ದಲ್ಲ.
ಬದಲಿಗೆ, ಸಾಂಪ್ರದಾಯಿಕ ಧಾಬಾ ಊಟದ ಅನುಭವಕ್ಕೆ ಡಿಜಿಟಲ್ ಸ್ಪರ್ಶ ಹಾಗೂ ಕೊಂಚ ಮನರಂಜನೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.
ಮುರ್ಥಲ್‌ನಲ್ಲಿ ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಧಾಬಾಗಳಿವೆ. ಎಲ್ಲರೊಂದಿಗೆ ಪೈಪೋಟಿಯಲ್ಲಿ ಮುಂದಿರಲು ಮತ್ತು ಗ್ರಾಹಕರಿಗೆ ಹೊಸ ಅನುಭವ ನೀಡಲು ಇಂತಹ ತಂತ್ರಜ್ಞಾನಗಳು ಸಹಕಾರಿಯಾಗಿವೆ. ಮುರ್ಥಲ್‌ನಲ್ಲಿ ಹಿಂದೆ ಟೇಬಲ್‌ಗೆ ಆಹಾರ ತಲುಪಿಸಲು ಆಟಿಕೆ ರೈಲುಗಳನ್ನು ಬಳಸಿದ ಪ್ರಯೋಗವೂ ಗಮನ ಸೆಳೆದಿತ್ತು, (ಏಜನ್ಸೀಸ್).