Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ರಾಜಕೀಯ ಲಾಭಕ್ಕಾಗಿ 1 ಕೋಟಿ ಭಾರತೀಯರ ಪ್ರಾಣ ಪಣಕ್ಕಿಟ್ಟ ಕಾಂಗ್ರೆಸ್..ಪ್ರಧಾನಿ ಮೋದಿ ಗಂಭೀರ ಆರೋಪ! | Narendra Modi

ತಿರುವನಂತಪುರಂ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ತೀವ್ರ ಸಂಘರ್ಷದ ಪರಿಸ್ಥಿತಿಯ ಕುರಿತು ಕಾಂಗ್ರೆಸ್ ನೀಡಿರುವ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟೀಕಿಸಿದ್ದು, ಕೇವಲ ರಾಜಕೀಯ ಲಾಭಕ್ಕೋಸ್ಕರ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕೋಟ್ಯಂತರ ಭಾರತೀಯರ ಜೀವಗಳನ್ನು ಪಣಕ್ಕಿಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು
ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸುಮಾರು ಒಂದು ಕೋಟಿ ಭಾರತೀಯರು ಗಲ್ಫ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅವರ ಸುರಕ್ಷಿತ ಮರಳುವಿಕೆ ಮತ್ತು ರಕ್ಷಣೆಯೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಈ ಸೂಕ್ಷ್ಮ ವಿಷಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ರಾಜಕೀಯ ಅತ್ಯಂತ ಅಪಾಯಕಾರಿ ಎಂದು ಕರೆದ ಪ್ರಧಾನಿ, ಇಂತಹ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಕಾಂಗ್ರೆಸ್ ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದರು. ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದಾಗಿನಿಂದ ತಾವು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳು ನಮ್ಮ ಪ್ರಜೆಗಳ ಸುರಕ್ಷತೆಗಾಗಿ 24/7 ಹಗಲಿರುಳು ಶ್ರಮಿಸುತ್ತಿವೆ ಎಂದು ತಿಳಿಸಿದರು.
ಈ ಯುದ್ಧದ ಪರಿಣಾಮ ಭಾರತದ ಮೇಲೆ ಕನಿಷ್ಠ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಜನರ ಹಿತಾಸಕ್ತಿಗಳ ರಕ್ಷಣೆ ಬಿಜೆಪಿ-ಎನ್‌ಡಿಎ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿರುವ ನಮ್ಮ ಸಹೋದರ ಸಹೋದರಿಯರು ಯಾವುದೇ ಕಷ್ಟಗಳನ್ನು ಎದುರಿಸದಂತೆ ನೋಡಿಕೊಳ್ಳಲು ರಾಯಭಾರ ಕಚೇರಿಗಳು ಸನ್ನದ್ಧವಾಗಿವೆ ಎಂದು ಹೇಳಿದರು.
ಸಂಘರ್ಷದ ಆರಂಭದಿಂದಲೂ ಪ್ರಧಾನಿ ನೇತೃತ್ವದ ಸಚಿವ ಸಂಪುಟವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ವಾರವಷ್ಟೇ ಪ್ರಧಾನಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಇದಷ್ಟೇ ಅಲ್ಲದೆ, ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಅಂತರ-ಸಚಿವಾಲಯ ಸಮಿತಿಯನ್ನು ಸಹ ಸರ್ಕಾರ ರಚಿಸಿದೆ ಎಂದು ವರದಿಯಾಗಿದೆ.
ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಈ ಎರಡೂ ಪಕ್ಷಗಳು ದಶಕಗಳಿಂದ ಕೇರಳದಲ್ಲಿ ಅಧಿಕಾರಕ್ಕೆ ಬಂದಿವೆ. ಹಲವಾರು ಹಗರಣಗಳು ನಡೆದಿದ್ದರೂ ಎರಡೂ ಮೈತ್ರಿಕೂಟಗಳು ಪರಸ್ಪರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು. ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ಪರಸ್ಪರ ಬಿ ಟೀಮ್​ ಎಂದು ಆರೋಪಿಸಿಕೊಳ್ಳುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಮಾತ್ರ ಎ ಟೀಮ್​ ಮತ್ತು ಏಕೈಕ ಸ್ಪರ್ಧಿ ಎಂಬುದನ್ನು ಅವರಿಬ್ಬರೂ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
2026ರ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದು, ಏಪ್ರಿಲ್ 9 ರಂದು ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಈ ಬಾರಿ ಕೇರಳದಲ್ಲಿ ಕಮಲ ಅರಳುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು(ಏಜೆನ್ಸೀಸ್​).