ಆರ್.ಜಿ. ಕರ್ ಪಾಪ ಮತ್ತು ಭ್ರಷ್ಟಾಚಾರವನ್ನು ಇನ್ಮೇಲೆ ಸಮರ್ಥಿಸಲು ನನ್ನ ಆತ್ಮಸಾಕ್ಷಿ ಒಪ್ಪಲ್ಲ! ಟಿಎಂಸಿ ರಾಷ್ಟ್ರೀಯ ವಕ್ತಾರ ಡಾ. ಶಂತನು ಸೇನ್ ದಿಢೀರ್ ರಾಜೀನಾಮೆ!  
ದೇಶ

ಆರ್.ಜಿ. ಕರ್ ಪಾಪ ಮತ್ತು ಭ್ರಷ್ಟಾಚಾರವನ್ನು ಇನ್ಮೇಲೆ ಸಮರ್ಥಿಸಲು ನನ್ನ ಆತ್ಮಸಾಕ್ಷಿ ಒಪ್ಪಲ್ಲ! ಟಿಎಂಸಿ ರಾಷ್ಟ್ರೀಯ ವಕ್ತಾರ ಡಾ. ಶಂತನು ಸೇನ್ ದಿಢೀರ್ ರಾಜೀನಾಮೆ! Santanu Sen Resigns

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕೇವಲ 293 ಸ್ಥಾನಗಳ ಪೈಕಿ ಬರೋಬ್ಬರಿ 207 ಸೀಟುಗಳನ್ನು ಗೆದ್ದು ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮುಳುಗುವ ಹಡಗಾಗಿದೆ. ಬುಧವಾರ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ನೀಡಿದ ಭಾರಿ ಆಘಾತದ ಬೆನ್ನಲ್ಲೇ, ಗುರುವಾರ (ಮೇ, 28) ಪಕ್ಷದ ಅತ್ಯಂತ ಪ್ರಭಾವಿ ಧ್ವನಿ, ರಾಷ್ಟ್ರೀಯ ಮುಖ್ಯ ವಕ್ತಾರ ಹಾಗೂ ಮಾಜಿ ರಾಜ್ಯಸಭಾ ಸಂಸದ ಡಾ. ಶಂತನು ಸೇನ್(Shantanu Sen resigns) ಟಿಎಂಸಿ ಆಲ್ ಇಂಡಿಯಾ ವಕ್ತಾರ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ನೇರವಾಗಿ ಕಳುಹಿಸಿರುವ ಈ ರಾಜೀನಾಮೆ ಪತ್ರದಲ್ಲಿ ಟಿಎಂಸಿಯ ಕರಾಳ ಭ್ರಷ್ಟಾಚಾರ ಮತ್ತು ಅನೈತಿಕತೆಯನ್ನು ಜಗತ್ತಿನ ಮುಂದೆ ಬೆತ್ತಲಾಗಿಸಿದ್ದು, ಇಡೀ ದೇಶದ ರಾಜಕೀಯ ವಲಯದಲ್ಲಿ ದಿಗಿಲು ಮೂಡಿಸಿದೆ.

ಜನರು ನಮ್ಮನ್ನು ತಿರಸ್ಕರಿಸಿದ್ದಾರೆ, ಇನ್ಮೇಲೆ ಈ ಪಾಪವನ್ನು ಸಮರ್ಥಿಸಲ್ಲ!

ಈ ಬಗ್ಗೆ ಸುದ್ದಿ ಸಂಸ್ಥೆ ANI ಹಂಚಿಕೊಂಡಿರುವ ಡಾ. ಶಂತನು ಸೇನ್ ಅವರ ರಾಜೀನಾಮೆ ಪತ್ರವು ಮಮತಾ ಬ್ಯಾನರ್ಜಿ ಅವರ ಇಮೇಜ್ ಅನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ. ಪತ್ರದಲ್ಲಿ ತಮ್ಮ ಆಳವಾದ ಆಕ್ರೋಶ ಹೊರಹಾಕಿರುವ ಶಂತನು ಸೇನ್, ವಿವಿಧ ಕಠಿಣ ಮತ್ತು ವಿವಾದಾತ್ಮಕ ಸಂದರ್ಭಗಳಲ್ಲಿ ಪಕ್ಷದ ನಿಲುವುಗಳೊಂದಿಗೆ ನನ್ನ ವೈಯಕ್ತಿಕ ಸಹಮತ ಇಲ್ಲದಿದ್ದರೂ, ಮಾಧ್ಯಮಗಳ ಮುಂದೆ ನಾನು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಹೋರಾಡಿದ್ದೆ. ಅದಕ್ಕಾಗಿ ಸಾರ್ವಜನಿಕರು ನನ್ನನ್ನು ಶ್ಲಾಘಿಸಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ, ಇಡೀ ಪಶ್ಚಿಮ ಬಂಗಾಳದ ಜನತೆ ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ದೇಶವನ್ನೇ ನಡುಗಿಸಿದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ಅಭಯಾ ಪ್ರಕರಣ) ಹಾಗೂ ನೌಕರಿಗಾಗಿ ಕೋಟ್ಯಂತರ ರೂಪಾಯಿ ಲಂಚ ಪಡೆದ ಭ್ರಷ್ಟಾಚಾರದ ಕಾರಣಕ್ಕಾಗಿಯೇ ಟಿಎಂಸಿ ಹೀನಾಯವಾಗಿ ಸೋತಿದೆ. ಇಂತಹ ಕರಾಳ ಅನೈತಿಕ ಕೃತ್ಯಗಳನ್ನು ಮತ್ತು ಭ್ರಷ್ಟಾಚಾರವನ್ನು ಟಿವಿ ಚಾನೆಲ್‌ಗಳಲ್ಲಿ ಕುಳಿತು ಸಮರ್ಥಿಸಲು ನನ್ನ ಆತ್ಮಸಾಕ್ಷಿ ಹಾಗೂ ಮನಸ್ಸು ಇನ್ಮೇಲೆ ಯಾವುದೇ ಕಾರಣಕ್ಕೂ ಒಪ್ಪುತ್ತಿಲ್ಲ. ಹಾಗಾಗಿ ಸಾರ್ವಜನಿಕರ ತೀರ್ಪನ್ನು ಗೌರವಿಸಿ ನಾನು ನನ್ನ ರಾಷ್ಟ್ರೀಯ ವಕ್ತಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಂತನು ಸೇನ್ ತಿಳಿಸಿದ್ದಾರೆ.

ಕಾಕೋಲಿ ಘೋಷ್ ಬಂಡಾಯಕ್ಕೆ ಸಿಕ್ಕ ಭೀಕರ ತಿರುವು!

ಇದಕ್ಕೂ ಮುನ್ನ, ಬುಧವಾರ ತೃಣಮೂಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪ್ರಕರಣ ಈಗ ಮತ್ತೊಂದು ಭೀಕರ ತಿರುವು ಪಡೆದುಕೊಂಡಿದೆ. ಲೋಕಸಭೆಯ ಚೀಫ್ ವ್ಹಿಪ್ ಹುದ್ದೆಯಿಂದ ತಮ್ಮನ್ನು ಏಕಪಕ್ಷೀಯವಾಗಿ ತೆಗೆದುಹಾಕಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಕೆಂಡಕಾರಿದ್ದ ಕಾಕೋಲಿ, ತಮ್ಮದೇ ಪಕ್ಷದ ಸಹೋದ್ಯೋಗಿ ಹಾಗೂ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಗಂಭೀರ ನಿಂದನೆಯ ಆರೋಪ ಹೊರಿಸಿದ್ದಾರೆ. ಸಹೋದ್ಯೋಗಿ ಸಂಸದನೊಬ್ಬ ಸಾರ್ವಜನಿಕವಾಗಿ ತಮಗೆ ನಡೆಸಿದ ನಿರಂತರ ನಿಂದನೆ ಮತ್ತು ದೌರ್ಜನ್ಯದಿಂದ ನನ್ನನ್ನು ರಕ್ಷಿಸಲು ಪಕ್ಷದ ಹೈಕಮಾಂಡ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಮತ್ತೊಂದು ದೂರಿನ ಪತ್ರವನ್ನು ಕಳುಹಿಸಿದ್ದಾರೆ. ಈ ಆಂತರಿಕ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪವು ಮಮತಾ ಬ್ಯಾನರ್ಜಿ ಅವರ ಮಹಿಳಾ ಪರ ಹೋರಾಟದ ಮುಖವಾಡವನ್ನು ಸಂಪೂರ್ಣವಾಗಿ ಕಳಚಿ ಹಾಕಿದೆ.

ಬಂಗಾಳದಲ್ಲಿ ಧೂಳೀಪಟವಾಯ್ತು ದೀದಿ ಸಾಮ್ರಾಜ್ಯ: ಕಮಲ ಕ್ರಾಂತಿ!

ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಇಂತಹ ಭೀಕರ ರಾಜಕೀಯ ಸ್ಥಿತ್ಯಂತರ ಹಿಂದೆಂದೂ ಸಂಭವಿಸಿರಲಿಲ್ಲ. ಇತ್ತೀಚಿನ ಮೇ 4 ರ ಫಲಿತಾಂಶದಲ್ಲಿ ಒಟ್ಟು 293 ಕ್ಷೇತ್ರಗಳ ಪೈಕಿ 207 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಂಗಾಳದ ಗದ್ದುಗೆ ಹಿಡಿದಿದೆ. ಇನ್ನು ಮೇ 21 ರಂದು ಮರುಮತದಾನ ನಡೆದಿದ್ದ ಪ್ರಮುಖ ಫಾಲ್ತಾ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಐತಿಹಾಸಿಕ ಸೋಲಿನ ಬೆನ್ನಲ್ಲೇ ಟಿಎಂಸಿಯ ಸಾಲು ಸಾಲು ಸಂಸದರು, ಶಾಸಕರು ಮತ್ತು ವಕ್ತಾರರು ಮಮತಾ ಸಾರಥ್ಯವನ್ನು ಕಟುವಾಗಿ ನಿಂದಿಸಿ ಹೊರನಡೆಯುತ್ತಿರುವುದು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಪೂರ್ಣ ಪತನಕ್ಕೆ ನಾಂದಿ ಹಾಡಿದೆ.
ಒಟ್ಟಾರೆಯಾಗಿ, ಕಾಕೋಲಿ ಘೋಷ್ ದಸ್ತಿದಾರ್ ಆರಂಭಿಸಿದ ಬಂಡಾಯದ ಕಿಚ್ಚು ಈಗ ಡಾ. ಶಂತನು ಸೇನ್ ಅವರ ರಾಜೀನಾಮೆಯ ಮೂಲಕ ಇಡೀ ಪಕ್ಷಕ್ಕೆ ವ್ಯಾಪಿಸಿದೆ. ಮಮತಾ ಬ್ಯಾನರ್ಜಿ ಬರೆದ 'ಗಿರ್ಗಿಟ್' ಕವನಕ್ಕೂ ಕ್ಯಾರೆ ಅನ್ನದ ನಾಯಕರು ಸಾಲು ಸಾಲಾಗಿ ಹೊರನಡೆಯುತ್ತಿರುವುದು ಬಂಗಾಳದಲ್ಲಿ ಟಿಎಂಸಿ ಕಥೆ ಮುಕ್ತಾಯದ ಹಂತಕ್ಕೆ ಬಂದಿರುವುದನ್ನು ಸಾಬೀತುಪಡಿಸಿದೆ,(ಏಜೆನ್ಸೀಸ್​).