ಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನೇಮಕಗೊಂಡ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ. 
ದೇಶ

ರಾಮಮಂದಿರ ಆಡಳಿತದಲ್ಲಿ ಐತಿಹಾಸಿಕ ಬದಲಾವಣೆ: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಮೊದಲ CEO ಆಗಿ ನೇಮಕ! Jitendra Mishra

ಅಯೋಧ್ಯಾ: ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದ ಆಡಳಿತ ಮಂಡಳಿಯಲ್ಲಿ ನೂತನ ಬದಲಾವಣೆ ತರಲಾಗಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ (CEO) ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ (Jitendra Mishra) ಅವರನ್ನು ನೇಮಕ ಮಾಡಿದೆ. ದೇವಾಲಯದ ದೈನಂದಿನ ಆಡಳಿತ, ಹಣಕಾಸು ಹಾಗೂ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಟ್ರಸ್ಟ್ ಈ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಟ್ರಸ್ಟ್​ ತಿಳಿಸಿದೆ. 
ಬುಧವಾರ (ಸೆ. 2) ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್‌ನ ಉನ್ನತ ಮಟ್ಟದ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಕೆಲ ಸದಸ್ಯರು ನೇರವಾಗಿ ಸಭೆಯಲ್ಲಿ ಭಾಗವಹಿಸಿದರೆ, ಇನ್ನುಳಿದವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗೆ ಹಾಜರಾಗಿ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ.

ಯಾರು ಈ ಜಿತೇಂದ್ರ ಮಿಶ್ರಾ?

ಭಾರತೀಯ ವಾಯುಪಡೆಯಲ್ಲಿ ಬರೋಬ್ಬರಿ 38 ವರ್ಷಗಳ ಕಾಲ ಅಪ್ರತಿಮ ಸೇವೆ ಸಲ್ಲಿಸಿರುವ ಜಿತೇಂದ್ರ ಮಿಶ್ರಾ, ದೇಶ ಕಂಡ ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರು. ಫೈಟರ್ ಪೈಲಟ್ ಆಗಿ, ಯುದ್ಧ ಬೋಧಕರಾಗಿ ಮತ್ತು ಪರೀಕ್ಷಾ ಪೈಲಟ್ ಆಗಿ ಅವರು ಸೇವೆ ಸಲ್ಲಿಸಿದ್ದಾರೆ. ಇವರ ಈ ಅದ್ಭುತ ಸೇವೆಗಾಗಿ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಸರ್ವೋತ್ತಮ್ ಯುದ್ಧ ಸೇವಾ ಪದಕ (SYSM), ಅತಿ ವಿಶಿಷ್ಟ ಸೇವಾ ಪದಕ (AVSM), ಮತ್ತು ವಿಶಿಷ್ಟ ಸೇವಾ ಪದಕ (VSM) ಒಲಿದುಬಂದಿವೆ.
ಮೂಲತಃ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯವರಾದ ಜಿತೇಂದ್ರ ಮಿಶ್ರಾ, ಭಾರತೀಯ ವಾಯುಪಡೆಯ ಪಶ್ಚಿಮ ವಾಯು ಕಮಾಂಡ್‌ನ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ದೇಶದ ಪ್ರಮುಖ 'ಆಪರೇಷನ್ ಸಿಂಧೂರ್'ನಲ್ಲೂ ಇವರ ಪಾತ್ರ ಬಹಳ ನಿರ್ಣಾಯಕವಾಗಿತ್ತು. 
ವಾಯುಪಡೆಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಮಿಶ್ರಾ, ಕಳೆದ ಏಪ್ರಿಲ್ 30, 2026 ರಂದು ವಾಯುಪಡೆಯಿಂದ ನಿವೃತ್ತರಾಗಿದ್ದರು. ಈಗ ಅವರಿಗೆ ರಾಮಮಂದಿರದ ಆಡಳಿತದಂತಹ ದೊಡ್ಡ ಜವಾಬ್ದಾರಿ ಸಿಕ್ಕಿದೆ.

ಟ್ರಸ್ಟ್‌ನಲ್ಲಿ ಬೇರೆ ಯಾರಿಗೆಲ್ಲ ಸ್ಥಾನ?

ಕೇವಲ ಸಿಇಒ ನೇಮಕ ಮಾತ್ರವಲ್ಲದೆ, ರಾಮಮಂದಿರ ಟ್ರಸ್ಟ್ ತನ್ನ ಆಡಳಿತ ಮಂಡಳಿಯನ್ನು ವಿಸ್ತರಿಸಿದೆ. ಮದನ್ ಮೋಹನ್ ಪಾಂಡೆ, ಮಹೇಶ್ ಭಾಗಚಂದ್ಕ ಮತ್ತು ನಿರ್ಮಲಾ ಯಾದವ್ ಅವರನ್ನು ಟ್ರಸ್ಟ್‌ನ ಹೊಸ ಮೂವರು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹೊಸ ನೇಮಕಾತಿಗಳ ಮೂಲಕ ರಾಮಮಂದಿರದ ಹಣಕಾಸು ಮತ್ತು ಇತರೆ ವ್ಯವಹಾರಗಳು ಇನ್ನಷ್ಟು ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುವ ನಿರೀಕ್ಷೆಯಿದೆ, (ಏಜನ್ಸೀಸ್​).