ಸ್ಪೀಕರ್ ಜೆಸಿಡಿ ಪ್ರಭಾಕರ್ ಮತ್ತು ಎಡಪ್ಪಾಡಿ ಪಳನಿಸ್ವಾಮಿ 
ದೇಶ

ಆರು ಎಐಎಡಿಎಂಕೆ ಶಾಸಕರ ರಾಜೀನಾಮೆ ಅಂಗೀಕಾರ: ತಮಿಳುನಾಡು ವಿಧಾನಸಭೆ ಸ್ಪೀಕರ್ ನಿರ್ಧಾರ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್ | Madras High Court

ವಿಪಕ್ಷ ಎಐಎಡಿಎಂಕೆ ಬಿಟ್ಟು ಆಡಳಿತರೂಢ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಆರು ಎಐಎಡಿಎಂಕೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ(ಅ. 13) ಎತ್ತಿ ಹಿಡಿದಿದೆ.

ಚೆನ್ನೈ: ವಿಪಕ್ಷ ಎಐಎಡಿಎಂಕೆ ಬಿಟ್ಟು ಆಡಳಿತರೂಢ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಆರು ಎಐಎಡಿಎಂಕೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ ತಮಿಳುನಾಡು ವಿಧಾನಸಭೆ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ(ಅ. 13) ಎತ್ತಿ ಹಿಡಿದಿದೆ.

ಆರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಎಐಎಡಿಎಂಕೆ ಸಚೇತಕ ಎಸ್.ಎಸ್. ಕೃಷ್ಣಮೂರ್ತಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಶಾಸಕರು ರಾಜೀನಾಮೆ ನೀಡುವ ನಿರ್ಧಾರದ ಹಿಂದಿನ ಸಂದರ್ಭಗಳನ್ನು ಸರಿಯಾಗಿ ಪರಿಶೀಲಿಸದೆ ಸ್ಪೀಕರ್ ತರಾತುರಿಯಲ್ಲಿ ಅಂಗೀಕರಿಸಿದ್ದಾರೆ ಎಂದು ಆರೋಪಿಸಿದ್ದರು.

ಅಷ್ಟೇ ಅಲ್ಲದೇ ಶಾಸಕರು ತಮ್ಮ ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಟಿವಿಕೆ ಸರ್ಕಾರವನ್ನು ಬೆಂಬಲಿಸಿ ವಿಶ್ವಾಸ ಮತ ಚಲಾಯಿಸಿದ್ದಾರೆ ಎಂಬ ಆರೋಪದ ಮೇಲೆ ಅನರ್ಹತೆ ಪ್ರಕ್ರಿಯೆಗಳು ನಡೆದಿವೆ. ಈ ವೇಳೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಸಮಯವನ್ನು ಪ್ರಶ್ನಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು, ಸ್ಪೀಕರ್ ನಿರ್ಧಾರವನ್ನು ಎತ್ತಿ ಹಿಡಿದಿದೆ. ಇನ್ನೂ ಈ ತೀರ್ಪು ಆರು ಶಾಸಕರ ರಾಜೀನಾಮೆ ಮತ್ತು ಬಾಕಿ ಇರುವ ಅನರ್ಹತೆ ಪ್ರಕ್ರಿಯೆಗಳ ಕಾನೂನು ವಿವಾದದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಅಧಿಕಾರಕ್ಕೆ ಬಂದ ಬಳಿಕ ಎಐಎಡಿಎಂಕೆಯಲ್ಲಿ ಒಡಕುಂಟಾಗಿ 25 ಶಾಸಕರ ಒಂದು ಬಣ ವಿಶ್ವಾಸಮತಯಾಚನೆ ಸಮಯದಲ್ಲಿ ಸರ್ಕಾರವನ್ನು ಬೆಂಬಲಿಸಿತ್ತು. ಬಳಿಕ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ಮರಗತಮ್ ಕುಮಾರವೇಲ್, ಪಿ ಸತ್ಯಬಾಮ, ಇಸಕ್ಕಿ ಸುಬ್ಬಯ್ಯ, ಜಯಕುಮಾರ್, ಎಂಆರ್ ವಿಜಯಭಾಸ್ಕರ್ ಹಾಗೂ ಸಿ ವಿಜಯಭಾಸ್ಕರ್ ಬಳಿಕ ಎಐಎಡಿಎಂಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರ್ಪಡೆಯಾಗಿದ್ದಾರೆ.

ಅವರಲ್ಲಿ ಮರಗತಮ್ ಕುಮಾರವೇಲ್ ಮತ್ತು ಸತ್ಯಭಾಮ ಇತ್ತೀಚೆಗೆ ಅಕ್ಟೋಬರ್ 6ರಂದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಟಿವಿಕೆ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ (ಏಜೆನ್ಸೀಸ್).