ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಯಾವಾಗ ಇಳಿಕೆಯಾಗಲಿದೆ? ಇಲ್ಲಿದೆ ನೋಡಿ ಮಹತ್ವದ ಸುಳಿವು...Petrol And Diesel
- ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ
- ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿಢೀರ್ ಕುಸಿತ
- ತೈಲ ಕಂಪನಿಗಳಿಂದ ದರ ಕಡಿತದ ಗಂಭೀರ ಚಿಂತನೆ.
- ಸಂಸತ್ ಕಲಾಪಕ್ಕೂ ಮುನ್ನವೇ ತೈಲ ದರ ಇಳಿಕೆ ನಿರೀಕ್ಷೆ
ನವದೆಹಲಿ: ದೇಶದ ಜನಸಾಮಾನ್ಯರಿಗೆ ಶೀಘ್ರದಲ್ಲೇ ಭರ್ಜರಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ( Petrol And Diesel ) ದರವನ್ನು ಇಳಿಕೆ ಮಾಡಲು ತೈಲ ಕಂಪನಿಗಳು ಗಂಭೀರ ಚಿಂತನೆ ನಡೆಸಿವೆ. ಮುಂಬರುವ ಸಂಸತ್ ಅಧಿವೇಶನಕ್ಕೂ ಮುನ್ನವೇ, ಅಂದರೆ ಈ ತಿಂಗಳ 20ರ ಒಳಗಾಗಿ ತೈಲ ದರ ಕಡಿತದ ಕುರಿತು ಅಧಿಕೃತ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 120 ಡಾಲರ್‌ಗೆ ಏರಿಕೆಯಾಗಿದ್ದ ಕಚ್ಚಾ ತೈಲದ ಬೆಲೆ, ನಂತರ 110 ಡಾಲರ್‌ಗೆ ಇಳಿದಿತ್ತು. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 70 ಡಾಲರ್ ಆಸುಪಾಸಿನಲ್ಲಿದೆ. ಜಾಗತಿಕ ಮಟ್ಟದ ಈ ದಿಢೀರ್ ಕುಸಿತ ಹಾಗೂ ಸೌದಿ ಅರೇಬಿಯಾದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿರುವುದು ಭಾರತೀಯ ಮಾರುಕಟ್ಟೆಯ ಮೇಲೂ ಧನಾತ್ಮಕ ಪರಿಣಾಮ ಬೀರಲು ಸಜ್ಜಾಗಿದೆ.
ವಿಶೇಷವೆಂದರೆ, ಭಾರತಕ್ಕೆ ಕಡಿಮೆ ದರದಲ್ಲಿ ತೈಲ ಪೂರೈಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಈ ಹಿಂದೆ ಒಪ್ಪಂದ ನಡೆದಿತ್ತು. ಇದಕ್ಕೆ ಪೂರಕವೆಂಬಂತೆ, ಏಷ್ಯಾದ ಮಾರುಕಟ್ಟೆಗಾಗಿ ಕಚ್ಚಾ ತೈಲದ ಬೆಲೆಯಲ್ಲಿ ಬರೋಬ್ಬರಿ 11 ಡಾಲರ್‌ಗಳಷ್ಟು ಕಡಿತ ಮಾಡುವುದಾಗಿ ಸೌದಿ ಅರೇಬಿಯಾ ಇತ್ತೀಚೆಗೆ ಘೋಷಿಸಿದೆ. ಸೌದಿ ಅರೇಬಿಯಾದ ಈ ಮಹತ್ವದ ತೀರ್ಮಾನವು ಭಾರತದಲ್ಲಿ ಇಂಧನ ದರ ಇಳಿಕೆಯಾಗುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನೊಂದೆಡೆ, ದೇಶದ ತೈಲ ಕಂಪನಿಗಳ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತಿದೆ. ಈ ಹಿಂದೆ ಎಲ್ಲಾ ತೈಲ ಕಂಪನಿಗಳು ಒಟ್ಟಾರೆಯಾಗಿ ಎದುರಿಸುತ್ತಿದ್ದ 750 ಬಿಲಿಯನ್ ಡಾಲರ್‌ಗಳಷ್ಟು ಭಾರಿ ನಷ್ಟದ ಪ್ರಮಾಣವು ಇದೀಗ ಕೇವಲ 50,000 ಡಾಲರ್‌ಗೆ ಕುಸಿದಿದೆ. ಇದೇ ಪರಿಸ್ಥಿತಿ ಇನ್ನು ಕೆಲವು ದಿನಗಳ ಕಾಲ ಮುಂದುವರಿದರೆ, ಕಂಪನಿಗಳು ತಮ್ಮ ಸಂಪೂರ್ಣ ನಷ್ಟವನ್ನು ಭರ್ತಿ ಮಾಡಿಕೊಳ್ಳಲಿವೆ. ಆರ್ಥಿಕ ಚೇತರಿಕೆಯ ಬೆನ್ನಲ್ಲೇ ಇಂಧನ ದರ ಕಡಿತದ ಪ್ರಕಟಣೆ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಷ್ಟೊಂದು ಕುಸಿದಿದ್ದರೂ ದೇಶದಲ್ಲಿ ಇಂಧನ ದರ ಕಡಿಮೆ ಮಾಡದ ಸರ್ಕಾರದ ನಿಲುವಿನ ವಿರುದ್ಧ ವಿಪಕ್ಷಗಳು ಈಗಾಗಲೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ರಾಜಕೀಯ ಒತ್ತಡ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಇದೇ ತಿಂಗಳ 20ರಂದು ಆರಂಭವಾಗಲಿರುವ ಸಂಸತ್ ಅಧಿವೇಶನಕ್ಕೂ ಮುನ್ನವೇ ಸರ್ಕಾರ ಮತ್ತು ಇಂಧನ ಕಂಪನಿಗಳು ಗ್ರಾಹಕರಿಗೆ ನಿರಾಳ ಸುದ್ದಿ ನೀಡುವ ಸಾಧ್ಯತೆಗಳಿವೆ, (ಏಜೆನ್ಸೀಸ್).