ನವದೆಹಲಿ: ಫ್ರಾನ್ಸ್ನಲ್ಲಿ ನಡೆದ ಗಲಭೆಗಳು ಮತ್ತು ಭಾರತದಲ್ಲಿ ಸಿಇಸಿ ವಿರುದ್ಧ ನಡೆದ ಪ್ರತಿಭಟನೆಗಳ ನಡುವೆ ಸಂಬಂಧವಿದೆ ಎಂದು ಪ್ರತಿಪಾದಿಸುವ 'ಫಾಕ್ಸ್ ನ್ಯೂಸ್' ವರದಿಯೊಂದನ್ನು ಉಲ್ಲೇಖಿಸಿ, ಬಿಜೆಪಿ ಗುರುವಾರ(ಅ. 22) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಮತ್ತು ದೇಶದಲ್ಲಿ ಕಾಂಗ್ರೆಸ್ನ ಆಡಳಿತ ಬದಲಾವಣೆಯ ಸಂಚು ಬಯಲಾಗಿದೆ ಎಂದು ಹೇಳಿದೆ.
ಫಾಕ್ಸ್ ನ್ಯೂಸ್ ಡಿಜಿಟಲ್ ನಡೆಸಿದ ತನಿಖೆಯ ಪ್ರಕಾರ, 13 ದೇಶಗಳಲ್ಲಿ ಹರಡಿರುವ 101 ಸಂಸ್ಥೆಗಳು ಪ್ರತಿಭಟನೆಗಳನ್ನು ಸಂಯೋಜಿಸುವ, ಆಯೋಜಿಸುವ ಅಥವಾ ತೀವ್ರಗೊಳಿಸುವ ಕೆಲಸದಲ್ಲಿ ತೊಡಗಿವೆ ಎಂದು ಆರೋಪಿಸಿದೆ. ಮತ್ತು ವರದಿಯು ಫ್ರಾನ್ಸ್ನಲ್ಲಿನ ಅಶಾಂತಿ ಹಾಗೂ ಭಾರತ ಮತ್ತು ಇತರ ದೇಶಗಳಲ್ಲಿ ಯುವಜನರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ನಡುವಿನ ಸಾಮ್ಯತೆಯನ್ನು ಎತ್ತಿ ತೋರಿಸಿದೆ ಎನ್ನಲಾಗಿದೆ.
ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಈ ವರದಿಯು ಕಾಂಗ್ರೆಸ್ನ ಅರಾಜಕತೆ ಮತ್ತು ಆಡಳಿತ ಬದಲಾವಣೆಯ ಸಂಚನ್ನು ಬಯಲು ಮಾಡಿದೆ. ರಾಹುಲ್ ಗಾಂಧಿ ಗದ್ದಾರ್(ದೇಶದ್ರೋಹಿ) ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕಥಿತ ದೇಶದ್ರೋಹದ ಕೊಂಡಿಗಳು ವಿದೇಶಿ ಏಜೆನ್ಸಿಗಳೊಂದಿಗೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ವಿವರಿಸುವ ವರದಿಯೊಂದು ಇಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಹೀಗಾಗಿ, 'ಈ ದೇಶದ್ರೋಹಿಗಳ ನಾಯಕ ಯಾರು?' ಎಂದು ಕೇಳುವುದು ತಪ್ಪಾಗಲಾರದು ಎಂದು ಕಿಡಿಕಾರಿದ್ದಾರೆ.
ವಿರೋಧ ಪಕ್ಷದ ನಾಯಕ ಬೇಜವಾಬ್ದಾರಿ ಮತ್ತು ಅಪಕ್ವವಾಗಿರುವುದು ಭಾರತದ ದುರದೃಷ್ಟ. ನಾನು ನಿಮ್ಮ ಮುಂದೆ ಸಾಕ್ಷ್ಯಾಧಾರಗಳನ್ನು ಮಂಡಿಸಿದರೆ, ಅವರನ್ನು ದೇಶದ್ರೋಹಿ ಅಥವಾ 'ಮೀರ್ ಜಾಫರ್' ಎಂದು ಕರೆಯುವುದು ತಪ್ಪಾಗಲಾರದು ಎಂದು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಾಕ್ಸ್ ನ್ಯೂಸ್ ನಡೆಸಿದ ತನಿಖೆಯು, ಫ್ರಾನ್ಸ್ ಸೇರಿದಂತೆ ಒಂಬತ್ತು ದೇಶಗಳಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಪ್ರಯತ್ನಿಸುವ ವ್ಯವಸ್ಥೆಯನ್ನು ಹೇಗೆ ಸೃಷ್ಟಿಸಿದೆ ಎಂಬುದನ್ನು ತೋರಿಸುತ್ತದೆ. ಇದು ಪ್ರತಿಭಟನೆಯ ಕೆಂಪು-ಹಸಿರು ಪರಿಸರ ವ್ಯವಸ್ಥೆ. ಕೆಂಪು ಕಮ್ಯುನಿಸ್ಟ್ ಗುಂಪುಗಳನ್ನು, ಹಸಿರು ಇಸ್ಲಾಮಿಸ್ಟ್ ಗುಂಪುಗಳನ್ನು ಪ್ರತಿನಿಧಿಸುತ್ತದೆ. ಜಾಗತಿಕವಾಗಿ ಅರಾಜಕತೆ ಸೃಷ್ಟಿಸಲು ಈ ಗುಂಪುಗಳು 101 ಗುಂಪುಗಳಾಗಿ ಬೆಳೆದಿದೆ ಎಂದು ಹೇಳುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ಈ ಆರೋಪಕ್ಕೆ ತಕ್ಷಣಕ್ಕೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ (ಏಜೆನ್ಸೀಸ್).