ಯಾವುದೇ ರಾಜಕೀಯ ಕುಟುಂಬಕ್ಕೆ ಇಷ್ಟೊಂದು ಅನ್ಯಾಯವಾಗಿಲ್ಲ: ರಾಂಪುರ ಜೈಲಿನಲ್ಲಿ ಅಜಂ ಖಾನ್ ಭೇಟಿಯಾದ ಅಖಿಲೇಶ್ ಯಾದವ್ | Akhilesh Yadav

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಚುರುಕುಗೊಳಿಸಿರುವಂತೆಯೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ(ಅ. 22) ರಾಂಪುರ ಜೈಲಿಗೆ ಭೇಟಿ ನೀಡಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಚರ್ಚೆ ನಡೆಸಿದ್ದಾರೆ.
ಅಜಂ ಖಾನ್ ಮತ್ತು ಅಖಿಲೇಶ್ ಯಾದವ್
ಅಜಂ ಖಾನ್ ಮತ್ತು ಅಖಿಲೇಶ್ ಯಾದವ್
Published on: 

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಚುರುಕುಗೊಳಿಸಿರುವಂತೆಯೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಗುರುವಾರ(ಅ. 22) ರಾಂಪುರ ಜೈಲಿಗೆ ಭೇಟಿ ನೀಡಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಚರ್ಚೆ ನಡೆಸಿದ್ದಾರೆ.

ಅಜಂ ಖಾನ್ ಭೇಟಿ ಬಳಿಕ ಮಾತನಾಡಿರುವ ಅಖಿಲೇಶ್ ಯಾದವ್, ಆಜಂ ಖಾನ್ ಅವರ ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ. ಮತ್ತು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಜಂ ಖಾನ್ ಕುಟುಂಬ ಅನುಭವಿಸಿರುವಷ್ಟು ಅನ್ಯಾಯವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಿಲ್ಲ ಎಂದು ಹೇಳಿದ್ದಾರೆ.

ಅಜಂ ಖಾನ್ ಅವರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದಾಗಿ ತಿಳಿಸಿದ ಅವರು, ಸಾಮಾಜಿಕ ನ್ಯಾಯದ ಬಗೆಗಿನ ತಮ್ಮ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿದರು. ಶಿಕ್ಷಣಕ್ಕೆ ಮೀಸಲಾದ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವ ಖಾನ್ ಅವರ ಕನಸನ್ನು ನನಸಾಗಿಸುವುದಾಗಿ ಭರವಸೆ ನೀಡಿದ್ದಾರೆ.

ಸತ್ಯವು ಒಂದಲ್ಲ ಒಂದು ದಿನ ಹೊರಬರಲೇಬೇಕು. ಅದು ಹೊರಬಂದಾಗ, ಇದಕ್ಕೆ ಕಾರಣರಾದವರು ಸಮಾಜ, ರಾಷ್ಟ್ರ ಮತ್ತು ಕಾನೂನಿನ ಮುಂದೆ ಉತ್ತರಿಸಬೇಕಾಗುತ್ತದೆ. ರಾಂಪುರದ ಆತ್ಮವನ್ನು ತುಳಿದು ಹಾಕಲಾಗಿದೆ. 'ರಾಮರಾಜ್ಯ'ದ ಮೂಲತತ್ವವನ್ನೇ ಹತ್ತಿಕ್ಕಲಾಗುತ್ತಿದೆ. ಅಜಂ ಖಾನ್ ಅವರು ಸಾಮಾಜಿಕ ನ್ಯಾಯದ ಗುರಿಯತ್ತ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.

Also Read
ಮುಂದಿನ 30 ವರ್ಷ ಕಾಂಗ್ರೆಸ್‌ಗೆ ಅಧಿಕಾರವಿಲ್ಲ; ರಾಹುಲ್ ಗಾಂಧಿ ಪ್ರಧಾನಿ ಆಗಲ್ಲ: 'ವೋಟ್​ ಚೋರಿ' ಗೆ ಅಮಿತ್ ಶಾ ಕೌಂಟರ್​! Amit Shah
ಅಜಂ ಖಾನ್ ಮತ್ತು ಅಖಿಲೇಶ್ ಯಾದವ್

ಖಾನ್ ಅವರ ಕುಟುಂಬ ಎದುರಿಸಿದ ಅನ್ಯಾಯವನ್ನು ಬೇರೆ ಯಾವುದೇ ಕುಟುಂಬ, ಅದರಲ್ಲೂ ವಿಶೇಷವಾಗಿ ರಾಜಕೀಯ ಕುಟುಂಬವೊಂದು ಎದುರಿಸಿಲ್ಲ ಎಂದು ಪ್ರತಿಪಾದಿಸಿರುವ ಅವರು, ಈ ಅನ್ಯಾಯಕ್ಕೆ ಯಾರು ಹೊಣೆ? ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರು ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆಜಂ ಇದ್ದರು, ಆಜಂ ಇದ್ದಾರೆ ಹಾಗೂ ಆಜಂ ಮುಂದೆಯೂ ಇರುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ರಾಂಪುರದಲ್ಲಿರುವ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ನಾಶಪಡಿಸಲು ಬಿಜೆಪಿ ಉದ್ದೇಶಪೂರ್ವಕ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಶಿಕ್ಷಣದ ಬಗ್ಗೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ವಿಶ್ವವಿದ್ಯಾಲಯದ ಬಗ್ಗೆ ಕಾಳಜಿ ವಹಿಸುವ ಬದಲಾಗಿ ಅದನ್ನು ನಾಶಪಡಿಸಿದ್ದಾರೆ. ಹಾಳುಮಾಡಲು ಉದ್ದೇಶಪೂರ್ವಕವಾದ ಪಿತೂರಿ ಮತ್ತು ಸಂಚು ರೂಪಿಸಲಾಗಿತ್ತು. ಬಹುಶಃ ಈ ಭೂಮಿಯ ಮೇಲೆ ಬೇರೆ ಯಾವುದೇ ಸರ್ಕಾರ, ಅಥವಾ ಸರ್ವಾಧಿಕಾರಿ ಆಡಳಿತ ಶಿಕ್ಷಣ ಕ್ಷೇತ್ರಕ್ಕೆ ಇಂತಹ ವಿನಾಶವನ್ನು ಉಂಟುಮಾಡಿರಲಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net