ರಸ್ತೆಯಲ್ಲಿ ಚೆಲ್ಲಾಟವಾಡಿದ್ರೆ ಸಾವು ಭೀಕರವಾಗಿರುತ್ತೆ:​ ರೀಲ್ಸ್ ಕ್ರೇಜ್​ಗೆ ಬಲಿಯಾದ ಮೂವರು ಸಹೋದರರು! Reels Craze  
ದೇಶ

ರಸ್ತೆಯಲ್ಲಿ ಚೆಲ್ಲಾಟವಾಡಿದ್ರೆ ಸಾವು ಭೀಕರವಾಗಿರುತ್ತೆ:​ ರೀಲ್ಸ್ ಕ್ರೇಜ್​ಗೆ ಬಲಿಯಾದ ಮೂವರು ಸಹೋದರರು! Reels Craze

ಪ್ರಮುಖ ಮುಖ್ಯಾಂಶಗಳು

  • ವೇಗದ ಚಾಲನೆ ಮಾಡಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಇಂದಿನ ಯುವ ಜನಾಂಗ ಕೇಳುತ್ತಿಲ್ಲ
  • ತಮ್ಮ ರೀಲ್ಸ್​ ಹುಚ್ಚಿಗೆ ವೇಗವಾಗಿ ವಾಹನ ಚಲಾಯಿಸಿ ಬಲಿಯಾಗುತ್ತಿದ್ದಾರೆ
  • ಇದೀಗ ತಮ್ಮ ಮೋಜಿಗಾಗಿ ಮಾಡಿದ ಕೆಲಸವೊಂದು ಮೂವರು ಸಹೋದರರನ್ನು ಬಲಿ ಪಡೆದುಕೊಂಡಿದೆ
  • ಮಧ್ಯಪ್ರದೇಶದಲ್ಲಿ ನಡೆದ ಈ ಭೀಕರ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ
Reels Craze : ನಾವಿಂದು ಸಾಮಾಜಿಕ ಜಾಲತಾಣ ಯುಗದಲ್ಲಿ ಬದುಕುತ್ತಿದ್ದೇವೆ. ಇದು ಹೇಗಿದೆ ಅಂದರೆ, ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಇಂದಿನ ಬಹುತೇಕ ಯುವಕರು ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ. ಇದಿಷ್ಟು ಒಂದು ಭಾಗವಾದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ರೀಲ್ಟ್​, ಶಾರ್ಟ್ಸ್​ ಎಂಬ ವಿಡಿಯೋಗಳನ್ನು ಮಾಡುತ್ತಾರೆ. ರೀಲ್ಸ್​ ಉನ್ಮಾದದಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಲು ಅಪಾಯವನ್ನು ತಮ್ಮ ಬಳಿಗೆ ಎಳೆದುಕೊಳ್ಳುತ್ತಿದ್ದಾರೆ ಮತ್ತು ಸಾವಿನ ಕೂಪಕ್ಕೂ ಸಿಲುಕುತ್ತಿದ್ದಾರೆ.
ವೇಗದ ಚಾಲನೆ ಮಾಡಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಇಂದಿನ ಯುವ ಜನಾಂಗ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ತಮ್ಮ ರೀಲ್ಸ್​ ಹುಚ್ಚಿಗೆ ವೇಗವಾಗಿ ವಾಹನ ಚಲಾಯಿಸಿ, ಬಲಿಯಾಗುತ್ತಿದ್ದಾರೆ. ಇಂಥದ್ದೇ ಘಟನೆಯೊಂದು ಇದೀಗ ನಡೆದಿದೆ. ತಮ್ಮ ಮೋಜಿಗಾಗಿ ಮಾಡಿದ ಕೆಲಸವೊಂದು ಮೂವರು ಸಹೋದರರನ್ನು ಬಲಿ ಪಡೆದುಕೊಂಡಿದೆ. ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಏಪ್ರಿಲ್ 14 ರಂದು, ಸಹೋದರರಾದ ಉಪಲಕ್ಷ್ ಕೋಲ್, ಅಮರೀಶ್ ಕೋಲ್ ಮತ್ತು ಹೇಮರಾಜ್ ಕೋಲ್ ಒಂದೇ ಬೈಕ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದರು. ಅವರಿಗಿಂತ ಮೊದಲು, ಅವರ ಸ್ನೇಹಿತರಾದ ಪ್ರಶಾಂತ್ ಮತ್ತು ಪ್ರದೀಪ್ ದ್ವಿವೇದಿ ಮತ್ತೊಂದು ಬೈಕ್‌ನಲ್ಲಿ ರೀಲ್ಸ್​ ಚಿತ್ರೀಕರಣ ಮಾಡುತ್ತಿದ್ದರು. ವಿಡಿಯೋದಲ್ಲಿ, ಬೈಕ್‌ನ ಕೊನೆಯಲ್ಲಿ ಕುಳಿತಿದ್ದ ಸಹೋದರ ಪಿಸ್ತೂಲ್​ ಹಿಡಿದಿದ್ದಾನೆ. ಅದು ನಿಜವಾದ ಪಿಸ್ತೂಲಾ? ಅಥವಾ ಡಮ್ಮಿ ಪಿಸ್ತೂಲಾ ಎಂಬುದು ತಿಳಿದುಬಂದಿಲ್ಲ.
ಸಹೋದರರು ವೇಗವಾಗಿ ಬೈಕ್​ ಚಲಾಯಿಸಿಕೊಂಡು ಹೋಗುವಾಗ, ತಮ್ಮ ಮುಂದಿರುವ ಟ್ರಕ್​ಗಳನ್ನು ಹಿಂದಕ್ಕೆ ಹಾಕಲು ಯತ್ನಿಸುತ್ತಾರೆ. ಒಂದೆರೆಡು ಟ್ರಕ್​ಗಳನ್ನು ಹಿಂದಿಕ್ಕಿ ವೇಗವಾಗಿ ಮುಂದೆ ಸಾಗುವಾಗ, ಮತ್ತೊಂದು ಟ್ರಕ್​ ಅನ್ನು ಹಿಂದಿಕ್ಕಲು ಯತ್ನಿಸುತ್ತಾರೆ ಆದರೆ, ನಿಯಂತ್ರಣ ಕಳೆದುಕೊಂಡ ಬೈಕ್​, ಟ್ರಕ್​ನ ಹಿಂಬದಿಗೆ ಡಿಕ್ಕಿ ಹೊಡೆಯುತ್ತದೆ.​ ಇದರ ಪರಿಣಾಮ ಮೂವರು ಸಹೋದರರು ಸ್ಥಳದಲ್ಲೇ ಸಾವಿಗೀಡಾಗುತ್ತಾರೆ.
ಇನ್ನೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಸ್ನೇಹಿತರು ಕೂಡ ಸ್ಕಿಡ್ ಆಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಘಟನೆ ಮೌಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪನ್ನಿ ಪಥಾರಿಯಾ ಬಳಿ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರಲ್ಲಿ ಅಜಾಗರೂಕ ಸ್ಟಂಟ್ ಸಂಸ್ಕೃತಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂದೂಕು ಎಲ್ಲಿದೆ ಎಂಬುದರ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ, (ಏಜೆನ್ಸೀಸ್​).