TMC Split | ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ ಎಂದ ರೆಬೆಲ್ಸ್ 
ದೇಶ

ಬಂಗಾಳದಲ್ಲಿ ಹೈಡ್ರಾಮಾ...ನಾವೇ ರಿಯಲ್ ಟಿಎಂಸಿ, ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ ಎಂದ ರೆಬೆಲ್ಸ್! | TMC Split

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ಸಂಪೂರ್ಣವಾಗಿ ಹರಿದು ಹಂಚಿಹೋಗುವ ಹಂತಕ್ಕೆ ತಲುಪಿದೆ. ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಬುಧವಾರ ವಿಧಾನಸಭೆಗೆ ತೆರಳಿ 58 ಬಂಡಾಯ ಶಾಸಕರ ಸಹಿ ಇರುವ ಪತ್ರವನ್ನು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಸಲ್ಲಿಸಿದ್ದಾರೆ. ತಮ್ಮದೇ ನೈಜ ಟಿಎಂಸಿ ಎಂದು ಪ್ರತಿಪಾದಿಸಿರುವ ಅವರು, ವಿರೋಧ ಪಕ್ಷದ ನಾಯಕನೆಂದು ಪರಿಗಣಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ರಿತಬ್ರತಾ ಜೊತೆ ಅರುಪ್ ರಾಯ್, ಶಿಯುಲಿ ಸಾಹಾ ಮತ್ತು ಅಕ್ರುಜ್ಜಮಾನ್ ಸೇರಿದಂತೆ ಹಲವು ಶಾಸಕರು ವಿಧಾನಸಭೆಗೆ ಆಗಮಿಸಿದ್ದರು. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಾವು ಇಂದು ಸಭೆ ನಡೆಸಲಿದ್ದೇವೆ ಎಂದು ಉತ್ತರ ಬಂಗಾಳದ ಶಾಸಕಿ ಸಬೀನಾ ಯಾಸ್ಮಿನ್ ತಿಳಿಸಿದ್ದಾರೆ.
ಈ ಪತ್ರದಲ್ಲಿ, ತಮ್ಮದೇ ನೈಜ ತೃಣಮೂಲ ಕಾಂಗ್ರೆಸ್ ಎಂದು ಪ್ರತಿಪಾದಿಸಲಾಗಿದೆಯಲ್ಲದೆ, ಮಮತಾ ಬ್ಯಾನರ್ಜಿ ಅವರೇ ಈ ಬಣದ ನಾಯಕಿ ಎಂದು ಅಚ್ಚರಿ ಎಂಬಂತೆ ಉಲ್ಲೇಖಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕೋಲ್ಕತ್ತಾದ ಎಂಟಾಲಿಯ ಶಾಸಕ ಸಂದೀಪನ್ ಸಾಹಾ ಮತ್ತು ಹೌರಾ ಜಿಲ್ಲೆಯ ಉಲುಬೇರಿಯಾ (ಪೂರ್ವ) ಶಾಸಕ ರಿತಬ್ರತಾ ಬ್ಯಾನರ್ಜಿಯನ್ನು ಟಿಎಂಸಿ ಸೋಮವಾರ ಮಧ್ಯಾಹ್ನವಷ್ಟೇ ಉಚ್ಚಾಟಿಸಿತ್ತು.
ರಿತಬ್ರತಾರನ್ನು ಬೆಂಬಲಿಸಿರುವ ಪಟ್ಟಿಗೆ ಸಹಿ ಮಾಡಿರುವ ಟಿಎಂಸಿ ಶಾಸಕ ಮುಸ್ತಫಿಜುರ್ ರೆಹಮಾನ್ ಮಾತನಾಡಿ, ನಮಗೆ ನಿಖರವಾದ ಸಂಖ್ಯೆ ಗೊತ್ತಿಲ್ಲ, ಆದರೆ 59 ಶಾಸಕರು ಸಹಿ ಮಾಡಿದ್ದಾರೆ ಎಂದು ಹೊರಗಡೆ ಕೇಳಿಬರುತ್ತಿದೆ. ನಾನು ಕೂಡ ಸಹಿ ಮಾಡಿದ್ದೇನೆ ಎಂದಿದ್ದಾರೆ. ಮತ್ತೊಂದೆಡೆ, ಶಾಸಕಿ ಪ್ರಿಯಾ ಪಾಲ್ ಜಾಗರೂಕತೆಯ ನಡೆ ಇಟ್ಟಿದ್ದು, ನಾನು ಸಭೆಗೆ ಹೋಗುತ್ತಿದ್ದೇನೆ, ಸಭೆಯ ನಂತರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಶೋಭನ್‌ದೇವ್ ಚಟ್ಟೋಪಾಧ್ಯಾಯರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಮತಾ ಬ್ಯಾನರ್ಜಿ ಹೆಸರಿಸಿದ ನಂತರ ಈ ಆಂತರಿಕ ಕಚ್ಚಾಟ ತಾರಕಕ್ಕೇರಿತ್ತು. ಶೋಭನ್‌ದೇವ್​​​ರನ್ನು ಬೆಂಬಲಿಸುವ ಪತ್ರದಲ್ಲಿದ್ದ ಶಾಸಕರ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ಸಂದೀಪನ್ ಸಾಹಾ ಮತ್ತು ರಿತಬ್ರತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಟಿಎಂಸಿ ತನ್ನದೇ ಶಾಸಕರ ಸಹಿ ಕದ್ದಿದೆ ಎಂದ ಸಿಎಂ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನ ಭ್ರಷ್ಟಾಚಾರ ಕೇವಲ ಬಂಗಾಳದ ಜನರನ್ನು ಮಾತ್ರವಲ್ಲ, ಅವರದೇ ಶಾಸಕರನ್ನೂ ಬಿಟ್ಟಿಲ್ಲ. ಟಿಎಂಸಿ ತನ್ನದೇ ಶಾಸಕರ ಸಹಿಗಳನ್ನು ಕರಗತ ಮಾಡಿಕೊಂಡಿದೆ (ಕದ್ದಿದೆ). ಈ ಬಗ್ಗೆ ಆ ಪಕ್ಷದ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ದೂರು ನೀಡಿದ್ದಾರೆ, ಇದರಲ್ಲಿ ನಮ್ಮದೇನು ಪಾತ್ರವಿಲ್ಲ ಎಂದು ತಿಳಿಸಿದ್ದಾರೆ. ಈ ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸಚಿವಾಲಯವು ಈಗಾಗಲೇ ಪೊಲೀಸ್ ದೂರು ದಾಖಲಿಸಿದ್ದು, ಸಿಐಡಿ ತನಿಖೆ ಆರಂಭಿಸಿದೆ. ಪತ್ರದಲ್ಲಿದ್ದ ಶಾಸಕರ ಸಹಿಗಳ ಮಾದರಿಯನ್ನು ಸಿಐಡಿ ಸಂಗ್ರಹಿಸುತ್ತಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಬಹರುಲ್ ಇಸ್ಲಾಂ, ಅರುಪ್ ರಾಯ್ ಮತ್ತು ಸುಭಾಶಿಶ್ ದಾಸ್ ಎಂಬ ಮೂವರು ಟಿಎಂಸಿ ಶಾಸಕರು ತಾವು ಆ ದಾಖಲೆಗೆ ಸಹಿ ಮಾಡಿಲ್ಲ ಎಂದು ಸಿಐಡಿ ಮುಂದೆ ಒಪ್ಪಿಕೊಂಡಿದ್ದಾರೆ. ತನಿಖಾಧಿಕಾರಿಗಳು ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದಲೂ, ಟಿಎಂಸಿಯ ಹಲವು ನಾಯಕರು ಪಕ್ಷದ ನಾಯಕತ್ವ ಮತ್ತು ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿಎಂಸಿ ಕೇವಲ 80 ಶಾಸಕರನ್ನು ಹೊಂದಿದ್ದರೆ, ಆಡಳಿತಾರೂಢ ಬಿಜೆಪಿ 207 ಸ್ಥಾನಗಳ ಭಾರಿ ಬಹುಮತದೊಂದಿಗೆ ಭದ್ರವಾಗಿದೆ(ಏಜೆನ್ಸೀಸ್​​).