ದೇಶ

ಎಸ್​ಐಆರ್ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸಿದ್ಧ; ಪ್ರತಿಪಕ್ಷಗಳು ಚರ್ಚೆಗೆ ಬರಲಿ: ಅಮಿತ್ ಶಾ ಸಾವಲು | Amit Shah

ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚರ್ಚೆ ನಡೆಸಲು ಸಂಸತ್​ನ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ದ ಎಂದು ಮಂಗಳವಾರ(ನ. 03) ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮತ್ತು ವಿಪಕ್ಷಗಳಿಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಸವಾಲು ಹಾಕಿದ್ದಾರೆ.

ರಾಯ್​ಪುರ: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚರ್ಚೆ ನಡೆಸಲು ಸಂಸತ್​ನ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ದ ಎಂದು ಮಂಗಳವಾರ(ನ. 03) ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮತ್ತು ವಿಪಕ್ಷಗಳಿಗೆ ಚರ್ಚೆಯಲ್ಲಿ ಭಾಗವಹಿಸುವಂತೆ ಸವಾಲು ಹಾಕಿದ್ದಾರೆ.

ರಾಯ್‌ಪುರದಲ್ಲಿ ನಡೆದ ಛತ್ತೀಸ್‌ಗಢ ರಾಜ್ಯೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಕ್ಸಲಿಸಂ ಅನ್ನು ಬೆಂಬಲಿಸುತ್ತಿದ್ದು, ಅದರ ನಾಯಕ ರಾಹುಲ್ ಗಾಂಧಿ ಮಾವೋವಾದಿಗಳ ಅಸಂವಿಧಾನಿಕ 'ಜನತಾನ ಸರ್ಕಾರ' ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ. ಮತ್ತು ಇತ್ತೀಚೆಗೆ ಅಣಕು ಸಂಸತ್ತನ್ನು ನಡೆಸುವ ಮೂಲಕ ಸಂಸತ್ತನ್ನು ಅಣಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಸತ್ತು ಕಾರ್ಯನಿರ್ವಹಿಸಲಿ. ಎಸ್‌ಐಆರ್ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧರಿದ್ದೇವೆ. ನಿಮಗೆ ಧೈರ್ಯವಿದ್ದರೆ, ಬನ್ನಿ ಮತ್ತು ಈ ದೇಶದ ಜನರ ಮುಂದೆ ಚರ್ಚೆಯಲ್ಲಿ ಪಾಲ್ಗೊಳ್ಳಿ. ಸಂವಿಧಾನದ ಪ್ರತಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವುದು ಎಂದರೆ ಅದನ್ನು ಬೆಂಬಲಿಸುವುದಲ್ಲ. ಒಬ್ಬರ ನಡವಳಿಕೆಯು ಸಾಂವಿಧಾನಿಕವಾಗಿರಬೇಕು ಎಂದು ರಾಹುಲ್ ಗಾಂಧಿಯನ್ನು ಕುಟುಕಿದ್ದಾರೆ.

ನರೇಂದ್ರ ಮೋದಿ ಸರ್ಕಾರವು ಕಾನೂನನ್ನು ಪಾಲಿಸುವವರನ್ನು ನಾಗರಿಕರೆಂದು ಪರಿಗಣಿಸುತ್ತದೆ. ಅದರೆ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತವೆ. ಅದು ಬಸ್ತಾರ್ ಆಗಿರಲಿ, ಈಶಾನ್ಯವಾಗಲಿ ಅಥವಾ ಕಾಶ್ಮೀರವಾಗಿರಲಿ. ಎಲ್ಲಾದರೂ ನಡೆದ್ರೂ ಕಾನೂನು ಕ್ರಮವಾಗಲಿದೆ ಎಂದಿದ್ದಾರೆ.

ಕಾಂಗ್ರೆಸ್ ನಿರಂತರವಾಗಿ ನಕ್ಸಲಿಸಂ ಅನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಅವರು, 2010ರಲ್ಲಿ ಆಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಶರಣಾಗಿಸುವ ಅಗತ್ಯವಿಲ್ಲ. ಆದರೆ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ಹೇಳಿದ್ದರು ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ (ಏಜೆನ್ಸೀಸ್).