ಮಮತಾ ಆಡಳಿತದ 1.69 ಕೋಟಿ ಜಾತಿ ಪ್ರಮಾಣಪತ್ರಗಳ ರೀ-ವೆರಿಫಿಕೇಶನ್! ಬಂಗಾಳದಲ್ಲಿ ಬಯಲಾಗಲಿದೆಯೇ ದೇಶದ ಅತಿ ದೊಡ್ಡ ನಕಲಿ ಮೀಸಲಾತಿ ಹಗರಣ?
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತಾವಧಿಯಲ್ಲಿ ನಡೆದ ನಿರ್ಧಾರಗಳ ಮೇಲೆ ಒಂದರ ಮೇಲೊಂದರಂತೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿ ಸರ್ಕಾರವು 2011 ರಿಂದ ಈಚೆಗೆ ವಿತರಿಸಿರುವ ಎಲ್ಲಾ ಜಾತಿ ಪ್ರಮಾಣಪತ್ರಗಳ (Re-verification of caste certificates) ದೃಢೀಕರಣ ಮತ್ತು ಸಿಂಧುತ್ವವನ್ನು ಮರುಪರಿಶೀಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೇ. 14 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಕಾನೂನುಬಾಹಿರವಾಗಿ ಮತ್ತು ನಕಲಿ ದಾಖಲೆಗಳ ಆಧಾರದ ಮೇಲೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂಬ ಗಂಭೀರ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಮಹತ್ವದ ತನಿಖೆಗೆ ಆದೇಶಿಸಲಾಗಿದೆ.
ದುಆರೆ ಸರ್ಕಾರ್' ಶಿಬಿರಗಳ ಮೇಲೆ ತೂಗುಗತ್ತಿ!
ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, 2011 ರಿಂದ ಪಶ್ಚಿಮ ಬಂಗಾಳದಲ್ಲಿ ಬರೋಬ್ಬರಿ 1.69 ಕೋಟಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಇವುಗಳಲ್ಲಿ 1 ಕೋಟಿ ಪರಿಶಿಷ್ಟ ಜಾತಿ (SC), 21 ಲಕ್ಷ ಪರಿಶಿಷ್ಟ ಪಂಗಡ (ST) ಮತ್ತು 48 ಲಕ್ಷ ಇತರ ಹಿಂದುಳಿದ ವರ್ಗಗಳ (OBC) ಪ್ರಮಾಣಪತ್ರಗಳು ಸೇರಿವೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ದುಆರೆ ಸರ್ಕಾರ್ (ಮನೆ ಬಾಗಿಲಿಗೆ ಸರ್ಕಾರ) ಶಿಬಿರಗಳ 10 ಹಂತಗಳಲ್ಲಿ ಮಾತ್ರವೇ ಸುಮಾರು 47.80 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಹಂಚಲಾಗಿತ್ತು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೆ, ಕೇವಲ ಶಿಬಿರಗಳಲ್ಲಿ ಅರ್ಜಿ ಸಲ್ಲಿಸಿದ ತಕ್ಷಣವೇ ನಕಲಿ ಸರ್ಟಿಫಿಕೇಟ್‌ಗಳನ್ನು ಸೃಷ್ಟಿಸಲಾಗಿದೆ ಎಂದು ವಿವಿಧ ಸಂಘಟನೆಗಳು ಕೋರ್ಟ್ ಮತ್ತು ಸರ್ಕಾರದ ಮೆಟ್ಟಿಲೇರಿದ್ದವು.
ನಕಲಿ ಪತ್ತೆಯಾದರೆ 'ಕ್ರಿಮಿನಲ್ ಕೇಸ್' ಮತ್ತು ವಜಾ!
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಸರ್ಕಾರದ ಕಾರ್ಯದರ್ಶಿಗಳು, 2011 ರ ನಂತರ ವಿತರಿಸಲಾದ ಮೂಲ ಪ್ರಮಾಣಪತ್ರಗಳು ಹಾಗೂ ಅವುಗಳ ಆಧಾರದ ಮೇಲೆ ಪಡೆದುಕೊಂಡಿರುವ ಎರಡನೇ ತಲೆಮಾರಿನ ವಂಶಾವಳಿ ಪ್ರಮಾಣಪತ್ರಗಳನ್ನೂ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದಾರೆ.
ಯಾರದೇ ಪ್ರಮಾಣಪತ್ರಗಳು ಕಾನೂನುಬಾಹಿರ ಅಥವಾ ನಕಲಿ ಎಂದು ಸಾಬೀತಾದರೆ, ತಕ್ಷಣವೇ ಅವುಗಳನ್ನು ರದ್ದುಗೊಳಿಸಲಾಗುವುದು. ಅಷ್ಟೇ ಅಲ್ಲದೆ, ತಪ್ಪಿತಸ್ಥರ ವಿರುದ್ಧ ಪಶ್ಚಿಮ ಬಂಗಾಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಗುರುತಿಸುವಿಕೆ) ಕಾಯ್ದೆ, 1994 ರ ಅಡಿಯಲ್ಲಿ ಕಠಿಣ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ಸೂಚಿಸಲಾಗಿದೆ.
ಮತದಾರರ ಪಟ್ಟಿಯಿಂದ ಡಿಲೀಟ್ ಆದವರ ಮೇಲೂ ಕಣ್ಣು
ಇತ್ತೀಚೆಗೆ ರಾಜ್ಯದಲ್ಲಿ ನಡೆದ SIR ಜಾರಿ ಕಾರ್ಯಾಚರಣೆಯ ಸಮಯದಲ್ಲಿ ಅಕ್ರಮ ವಲಸೆ ಅಥವಾ ನಕಲಿ ದಾಖಲೆಗಳ ಕಾರಣದಿಂದ ಯಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆಯೋ, ಅಂತಹ ವ್ಯಕ್ತಿಗಳು ಮತ್ತು ಅವರ ಅವಲಂಬಿತರು ಪಡೆದಿರುವ ಜಾತಿ ಪ್ರಮಾಣಪತ್ರಗಳನ್ನು ತಕ್ಷಣವೇ ಪರಿಶೀಲಿಸಿ ರದ್ದುಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದು, ಪಶ್ಚಿಮ ಬಂಗಾಳದಲ್ಲಿ ನಕಲಿ ಜಾತಿ ಪತ್ರಗಳನ್ನು ಪಡೆದು ಸರ್ಕಾರಿ ಸೌಲತ್ತು ಮತ್ತು ಮೀಸಲಾತಿ ಅನುಭವಿಸುತ್ತಿದ್ದ ಜಾಲಕ್ಕೆ ಈ ಆದೇಶ ದೊಡ್ಡ ಮರಣಾಘಾತ ನೀಡಿದೆ.
ಅಧಿಕಾರಿಗಳಿಗೆ 'ವೈಯಕ್ತಿಕ ಹೊಣೆಗಾರಿಕೆ' ಎಚ್ಚರಿಕೆ!
ಈ ಇಡೀ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಲಂಚದ ಆಮಿಷಕ್ಕೆ ಒಳಗಾಗಿ ತಪ್ಪು ವರದಿ ನೀಡಿದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಮಾತ್ರವಲ್ಲದೆ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನೂತನ ಸರ್ಕಾರದ ಈ ಕಠಿಣ ನಡೆಯಿಂದಾಗಿ ಟಿಎಂಸಿ ನಾಯಕರು ಹಾಗೂ ಅಕ್ರಮವಾಗಿ ಮೀಸಲಾತಿ ಪಡೆದವರಲ್ಲಿ ನಡುಕ ಶುರುವಾಗಿದೆ,(ಏಜೆನ್ಸೀಸ್).