ಪಂಜಾಬ್ ಮಣಿಸಿ ಪ್ಲೇಆಫ್ಸ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ; ವೆಂಕಟೇಶ್ ಅಯ್ಯರ್, ಕೊಹ್ಲಿ ಬ್ಯಾಟಿಂಗ್ ಆರ್ಭಟಕ್ಕೆ ಕಂಗಾಲಾದ ಶ್ರೇಯಸ್ ಪಡೆ!
ಬೆಂಗಳೂರು: ಐಪಿಎಲ್ 2026ರ ಟೇಬಲ್ ಟಾಪರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCBvsPBKS) ತಂಡದ ವಿಜಯಯಾತ್ರೆಗೆ ತಡೆಯೊಡ್ಡುವ ಶಕ್ತಿ ಸದ್ಯಕ್ಕೆ ಯಾರಿಗೂ ಇದ್ದಂತೆ ಕಾಣುತ್ತಿಲ್ಲ. ಭಾನುವಾರ ನಡೆದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್ ಆರ್‌ಸಿಬಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಯಶಸ್ವಿ ಹೆಜ್ಜೆ ಇಟ್ಟಿದ್ದು, ಈ ಸೀಸನ್‌ನಲ್ಲಿ ಪ್ಲೇಆಫ್ಸ್ ಟಿಕೆಟ್ ಗಿಟ್ಟಿಸಿಕೊಂಡ ಸಾರ್ವಕಾಲಿಕ ಮೊದಲ ತಂಡ ಎನಿಸಿಕೊಂಡಿದೆ.
ಮತ್ತೊಂದೆಡೆ, ಸರಣಿ ಸೋಲುಗಳಿಂದ ಕಂಗಾಲಾಗಿರುವ ಪಂಜಾಬ್ ಕಿಂಗ್ಸ್ ಸತತ 6ನೇ ಸೋಲನ್ನು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಬೆಂಗಳೂರು ರನ್ ಮಳೆ: ಕೊಹ್ಲಿ, ಪಡಿಕ್ಕಲ್ ಭದ್ರ ಬುನಾದಿ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ರನ್ ಮಷಿನ್ ವಿರಾಟ್ ಕೊಹ್ಲಿ (58 ರನ್, 4 ಬೌಂಡರಿ, 3 ಸಿಕ್ಸರ್) ಮತ್ತೊಮ್ಮೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ದೇವದತ್ ಪಡಿಕ್ಕಲ್ (45 ರನ್) ಜೊತೆಗೂಡಿ ಎರಡನೇ ವಿಕೆಟ್‌ಗೆ ಬರೊಬ್ಬರಿ 76 ರನ್‌ಗಳ ಅತ್ಯಮೂಲ್ಯ ಜೊತೆಯಾಟವಾಡಿದ ಕೊಹ್ಲಿ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್: ಧೂಳೀಪಟವಾದ ಪಂಜಾಬ್ ಬೌಲಿಂಗ್ ಜಾಲ!
ವಿರಾಟ್ ಕೊಹ್ಲಿ ಔಟಾದ ನಂತರ ಕ್ರೀಸ್‌ಗೆ ಬಂದ ವೆಂಕಟೇಶ್ ಅಯ್ಯರ್ ಪಂಜಾಬ್ ಬೌಲರ್‌ಗಳ ಮೇಲೆ ಸಿಡಿಲಿನಂತೆ ಎರಗಿದರು. ಕೊಹ್ಲಿ ಜೊತೆ 3ನೇ ವಿಕೆಟ್‌ಗೆ 60 ರನ್ ಸೇರಿಸಿದ ಅಯ್ಯರ್, ಕೊಹ್ಲಿ ನಿರ್ಗಮನದ ಬಳಿಕ ಮತ್ತಷ್ಟು ರಗಡ್ ಆಗಿ ಬ್ಯಾಟ್ ಬೀಸಿದರು. ಪಂಜಾಬ್‌ನ ಪ್ರತಿಯೊಬ್ಬ ಬೌಲರ್‌ನನ್ನೂ ಮೈದಾನದ ಮೂಲೆ ಮೂಲೆಗೂ ಅಟ್ಟಿದ ಅವರು ಕೇವಲ 8 ಬೌಂಡರಿ ಹಾಗೂ 4 ಗಗನಚುಂಬಿ ಸಿಕ್ಸರ್‌ಗಳ ನೆರವಿನಿಂದ 73 ರನ್ ಗಳಿಸಿ ಅಜೇಯರಾಗುಳಿದರು. ಅಯ್ಯರ್ ಅವರ ಈ ಬಿರುಗಾಳಿಯಂತಹ ಸ್ಟ್ರೈಕ್ ರೇಟ್‌ನಿಂದಾಗಿ ಆರ್‌ಸಿಬಿ ಅತ್ಯಂತ ಸುಲಭವಾಗಿ 200ರ ಗಡಿಯನ್ನು ದಾಟಿ 222 ರನ್‌ಗಳ ಹಿಮಾಲಯದಂತಹ ಮೊತ್ತ ದಾಖಲಿಸಿತು. ಪಂಜಾಬ್ ಪರ ಹರ್‌ಪ್ರೀತ್ ಬ್ರಾರ್ 2 ವಿಕೆಟ್ ಪಡೆದರು.
ಹ್ಯಾಜಲ್‌ವುಡ್, ರಾಸಿಖ್ ಸಲಾಂ ಧಾರಕ ಘಾತಕ ಬೌಲಿಂಗ್!
223 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲೇ ಆರ್‌ಸಿಬಿ ಬೌಲರ್‌ಗಳು ಶಾಕ್ ನೀಡಿದರು. ಮಾರ್ಕಸ್ ಸ್ಟೊಯಿನಿಸ್ (37 ರನ್) ಬೌಂಡರಿಗಳನ್ನು ಬಾರಿಸಿ ಆಸರೆಯಾಗಲು ಯತ್ನಿಸಿದರಾದರೂ, ಆರ್‌ಸಿಬಿಯ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಕರಾರುವಾಕ್ ಬೌಲಿಂಗ್ ಮೂಲಕ ಸ್ಟೊಯಿನಿಸ್ ವಿಕೆಟ್ ಪಡೆದು ಪಂಜಾಬ್‌ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್ ಸಿಂಗ್ ಕೇವಲ 27 ಎಸೆತಗಳಲ್ಲಿ 56 ರನ್ ಚಚ್ಚಿ ಪಂಜಾಬ್ ತಂಡದಲ್ಲಿ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. ಶಶಾಂಕ್ ಸಿಂಗ್ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಕ್ರೀಸ್‌ನಲ್ಲಿದ್ದಾಗ ಪಂದ್ಯ ರೋಮಾಂಚನಕಾರಿ ಘಟ್ಟ ತಲುಪಿತ್ತು. ಈ ಹಂತದಲ್ಲಿ ದಾಳಿಗಿಳಿದ ಆರ್‌ಸಿಬಿಯ ಯುವ ಬೌಲರ್ ರಾಸಿಖ್ ಸಲಾಂ ದಾರ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 3 ಪ್ರಮುಖ ವಿಕೆಟ್ ಕಡಿಯುವ ಮೂಲಕ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಆರ್‌ಸಿಬಿ 23 ರನ್‌ಗಳ ಐತಿಹಾಸಿಕ ಜಯಭೇರಿ ಬಾರಿಸಿತು,(ಏಜೆನ್ಸೀಸ್).