ಮುಂದಿನ ಹಣಕಾಸು ವರ್ಷದಿಂದ ಪಾಲಿಮರ್​ ನೋಟುಗಳು ಚಲಾವಣೆಗೆ: ಕಾಗದದ ನೋಟು​ ಬ್ಯಾನ್​ ಆಗುತ್ತಾ? RBI ಹೇಳಿದ್ದೇನು? Polymer Notes 
ದೇಶ

ಮುಂದಿನ ಹಣಕಾಸು ವರ್ಷದಿಂದ ಪಾಲಿಮರ್​ ನೋಟುಗಳು ಚಲಾವಣೆಗೆ: ಕಾಗದದ ನೋಟು​ ಬ್ಯಾನ್​ ಆಗುತ್ತಾ? RBI ಹೇಳಿದ್ದೇನು? Polymer Notes

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲೂ ಶೀಘ್ರವೇ ಚಲಾವಣೆಗೆ ಬರಲಿವೆ ಮೊದಲ ಪಾಲಿಮರ್ ನೋಟುಗಳು
  • ಮುಂದಿನ ಹಣಕಾಸು ವರ್ಷದಿಂದ ಜಾರಿಯಾಗಲಿದೆ ಪ್ಲಾಸ್ಟಿಕ್ ನೋಟುಗಳ ಸಂಚಲನ
  • ರೂಪಾಯಿ ಹತ್ತು ಹಾಗೂ ಇಪ್ಪತ್ತರ ಮುಖಬೆಲೆಯಲ್ಲಿ ಪಾಲಿಮರ್ ನೋಟುಗಳ ಮುದ್ರಣ
  • ಕಾಗದದ ನೋಟುಗಳಿಗಿಂತ ನಾಲ್ಕು ಪಟ್ಟು ಅಧಿಕ ಬಾಳಿಕೆ ಬರಲಿರುವ ಪಾಲಿಮರ್ ಕರೆನ್ಸಿ
  • ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕಲು ಆರ್‌ಬಿಐಯಿಂದ ಮಾಸ್ಟರ್ ಪ್ಲಾನ್
ನವದೆಹಲಿ: ಭಾರತದ ಮೊದಲ ಪ್ಲಾಸ್ಟಿಕ್ ಅಥವಾ ಪಾಲಿಮರ್ ನೋಟುಗಳು ( Polymer Notes ) ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಚಲಾವಣೆಗೆ ಬರುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ( Sanjay Malhotra ) ಇಂದು (ಆಗಸ್ಟ್​ 05) ತಿಳಿಸಿದ್ದಾರೆ.
ಇಂದು ನಡೆದ ಹಣಕಾಸು ನೀತಿ ಪತ್ರಿಕಾಗೋಷ್ಠಿಯಲ್ಲಿ ಪಾಲಿಮರ್​ ನೋಟು ಪ್ರಾಜೆಕ್ಟ್ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡ ಮಲ್ಹೋತ್ರಾ, ಪ್ರಸ್ತುತ ಇದು ಪ್ರಾಯೋಗಿಕ ಹಂತದಲ್ಲಿದ್ದು, ಇದರ ವಿಸ್ತರಣೆಯು ಪರೀಕ್ಷೆಯ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಸದ್ಯ ಕ್ಷೇತ್ರ ಮಟ್ಟದಲ್ಲಿ ಪ್ರಯೋಗಗಳಿಗಾಗಿ ತಲಾ 10 ಮತ್ತು 20 ರೂ. ಮುಖಬೆಲೆಯ ತಲಾ 1 ಬಿಲಿಯನ್‌ನಂತೆ ಒಟ್ಟು 2 ಬಿಲಿಯನ್ ಪಾಲಿಮರ್ ಬ್ಯಾಂಕ್‌ ನೋಟುಗಳನ್ನು ಮುದ್ರಿಸಲು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಅಧಿಕಾರ ನೀಡಿದೆ. ಸದ್ಯಕ್ಕೆ ಕಾಗದದ ಕರೆನ್ಸಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲದ ಕಾರಣ, ಪಾಲಿಮರ್ ಮತ್ತು ಕಾಗದದ ಎರಡೂ ನೋಟುಗಳು ಕಾನೂನುಬದ್ಧ ಹಣವಾಗಿ ಏಕಕಾಲದಲ್ಲಿ ಚಲಾವಣೆಯಲ್ಲಿರಲಿವೆ ಎಂದು ಸಂಜಯ್ ಮಲ್ಹೋತ್ರಾ ಅವರು ಮಾಹಿತಿ ನೀಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಪಾಲಿಮರ್​ ನೋಟುಗಳನ್ನು ಜಾರಿಗೆ ಅಥವಾ ಚಲಾವಣೆಗೆ ತರುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ. ಅಲ್ಲದೆ, ಪಾಲಿಮರ್ ನೋಟುಗಳು ದೀರ್ಘಕಾಲ ಬಾಳಿಕೆ ಬರುವ ಕಾರಣ, ವಿಶೇಷವಾಗಿ ಕಡಿಮೆ ಮುಖಬೆಲೆಯ ನೋಟುಗಳು ಬೇಗ ಹರಿದುಹೋಗುವುದನ್ನು ತಪ್ಪಿಸಲು ಇದು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ. ವಿವಿಧ ದೇಶಗಳಲ್ಲಿ ಈ ನೋಟುಗಳು 30 ವರ್ಷಗಳಿಂದ ಚಲಾವಣೆಯಲ್ಲಿದ್ದು, ಕಾಗದದ ನೋಟುಗಳಿಗಿಂತ ಎರಡು ಅಥವಾ ನಾಲ್ಕು ಪಟ್ಟು ಹೆಚ್ಚು ಆಯಸ್ಸನ್ನು ಹೊಂದಿವೆ ಎಂದು ಮಲ್ಹೋತ್ರಾ ವಿವರಿಸಿದ್ದಾರೆ.
ಆರ್ಥಿಕತೆಯ ಅಗತ್ಯಗಳಿಗೆ ತಕ್ಕಂತೆ ಕರೆನ್ಸಿ ಮುದ್ರಣ ಸಾಮರ್ಥ್ಯವನ್ನು ವಿಸ್ತರಿಸುವುದು ಪಾಲಿಮರ್ ನೋಟುಗಳನ್ನು ಪರಿಚಯಿಸುತ್ತಿರುವ ಎರಡನೇ ಮುಖ್ಯ ಉದ್ದೇಶವಾಗಿದೆ. ಭಾರತದ ಹವಾಮಾನ ಪರಿಸ್ಥಿತಿಗಳು ಮತ್ತು ಮೂಲಭೂತ ಸೌಕರ್ಯಗಳಲ್ಲಿ ಈ ನೋಟುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರೀಕ್ಷಿಸಿ, ನಂತರ ಮುಂದಿನ ಹಂತದ ವಿಸ್ತರಣೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಇದೇ ಸಮಯದಲ್ಲಿ ಮಲ್ಹೋತ್ರಾ ಅವರು ತಿಳಿಸಿದರು.
ಈ ಮಹತ್ವದ ಯೋಜನೆಯ ಭಾಗವಾಗಿ, ಆರ್‌ಬಿಐ ತನ್ನ ಕರೆನ್ಸಿ ಮುದ್ರಣ ಅಂಗಸಂಸ್ಥೆಯಾದ ಭಾರತೀಯ ರಿಸರ್ವ್​ ಬ್ಯಾಂಕ್​ ನೋಟ್​ ಮುದ್ರಣ್​ ಪ್ರೈವೆಟ್​ ಲಿಮಿಟೆಡ್​ (BRBNMPL) ಮೂಲಕ ಜಾಗತಿಕ ಟೆಂಡರ್ ಕರೆದಿದೆ. ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಪಾಲಿಮರ್ ಸಬ್‌ಸ್ಟ್ರೇಟ್ ಹಾಳೆಗಳ ಸರಬರಾಜುದಾರರನ್ನು ಹುಡುಕಲಾಗುತ್ತಿದ್ದು, ಸಂಭಾವ್ಯ ಪೂರೈಕೆದಾರರು ಕಠಿಣ ಮಾನದಂಡಗಳನ್ನು ಪಾಲಿಸಬೇಕಿದೆ.
ಕಳೆದ ದಶಕದಲ್ಲಿ ಭಾರತದಲ್ಲಿ ಸುಮಾರು 50 ಲಕ್ಷ ಕೋಟಿ ರೂ. ಮೌಲ್ಯದ ಮಲಿನಗೊಂಡ ಕರೆನ್ಸಿಯನ್ನು ಹಿಂಪಡೆಯಲಾಗಿದೆ. ಭದ್ರತಾ ವೈಶಿಷ್ಟ್ಯಗಳಿಗಾಗಿ ವಾರ್ಷಿಕವಾಗಿ ಸುಮಾರು 5,000 ಕೋಟಿ ರೂ. ವೆಚ್ಚವಾಗುತ್ತಿದ್ದು, ಎಫ್‌ವೈ17 ರಿಂದ ಹೊಸದಾಗಿ ಮುದ್ರಿಸಿದ ಪ್ರತಿ 100 ನೋಟುಗಳಿಗೆ 71 ಹಳೆಯ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲಾಗಿದೆ.
ಚೀನಾ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಕಾರ್ಯಾಚರಣೆ ಹಾಗೂ ಕಚ್ಚಾ ವಸ್ತುಗಳ ಮೇಲೆ ನಿರ್ಬಂಧಗಳು ಇರಲಿದ್ದು, ಕೇಂದ್ರ ಬ್ಯಾಂಕ್‌ಗಳಿಗೆ ಪಾಲಿಮರ್ ನೋಟುಗಳನ್ನು ಪೂರೈಸಿದ ಮುಂಚಿನ ಅನುಭವವಿರುವ ಕಂಪನಿಗಳಿಗೆ ಮಾತ್ರ ಸರಬರಾಜುದಾರರಾಗಲು ಕಠಿಣ ಸರ್ಕಾರದ ಭದ್ರತಾ ಅನುಮೋದನೆ ಕಡ್ಡಾಯಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ ಕಾಗದದ ನೋಟುಗಳಿಗೆ ಹೋಲಿಸಿದರೆ ಪಾಲಿಮರ್ ನೋಟುಗಳ ಆಯುಸ್ಸು ಗಣನೀಯವಾಗಿ ಹೆಚ್ಚಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ ಲೋಕಸಭೆಗೆ ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ಐದು ಪೌಂಡ್ ನೌಟಿನ ಆಯುಸ್ಸು 1.9 ವರ್ಷದಿಂದ 4.8 ವರ್ಷಕ್ಕೆ ಏರಿಕೆಯಾಗಿದ್ದು, ಕೆನಡಾದಲ್ಲೂ ಇವುಗಳ ಬಾಳಿಕೆ ನಾಲ್ಕು ಪಟ್ಟು ಹೆಚ್ಚಾಗಿದೆ.
ಪಾಲಿಮರ್ ನೋಟುಗಳು ಅತ್ಯುತ್ತಮ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ನಕಲಿ ನೋಟುಗಳ ಹಾವಳಿಯನ್ನು ಗಮನಾರ್ಹವಾಗಿ ತಗ್ಗಿಸುತ್ತವೆ. ಕಡಿಮೆ ಜೀವಿತಾವಧಿ ವೆಚ್ಚ ಹಾಗೂ ಸಣ್ಣ ಕಾರ್ಬನ್ ಹೆಜ್ಜೆಗುರುತನ್ನು ಹೊಂದಿರುವ ಈ ನೋಟುಗಳ ಬಳಕೆ ಇಂಗ್ಲೆಂಡ್ ಬ್ಯಾಂಕ್‌ನ ವರದಿಗಳ ಪ್ರಕಾರ ನಕಲಿ ಕರೆನ್ಸಿ ಚಲಾವಣೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಿದೆ, (ಏಜೆನ್ಸೀಸ್​).