ತಿರುವನಂತಪುರಂ: ಕೇರಳಂನ ನೆಯ್ಯಾಯಿದಿಂಕರೆಯ ಒಂಬತ್ತು ವರ್ಷದ ಬಾಲಕಿಯೊಬ್ಬಳಿಗೆ ಅಪರೂಪದ ವೈದ್ಯಕೀಯ ಪರಿಸ್ಥಿತಿ ಎದುರಾಗಿದ್ದು, ಆಕೆಯ ಹೊಟ್ಟೆಯಿಂದ ಬರೋಬ್ಬರಿ ಒಂದು ಕೆಜಿ ಕೂದಲನ್ನು ( Rapunzel Syndrome ) ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಬಾಲಕಿಯು ನಿರಂತರವಾದ ಹೊಟ್ಟೆನೋವು ಹಾಗೂ ವಾಂತಿ ಸಮಸ್ಯೆಯಿಂದ ಬಳಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದಳು. ವೈದ್ಯರು ವಿವರವಾದ ಪರೀಕ್ಷೆಯನ್ನು ನಡೆಸಿದಾಗ, ಜಗತ್ತಿನಲ್ಲಿ ನೂರಕ್ಕಿಂತ ಕಡಿಮೆ ಜನರಲ್ಲಿ ಮಾತ್ರ ವರದಿಯಾಗಿರುವ 'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿಂದ ಮಗು ಬಳಲುತ್ತಿರುವುದು ಪತ್ತೆಯಾಗಿದೆ. ಮಾನಸಿಕ ಒತ್ತಡ ಹಾಗೂ ಅಭದ್ರತೆಯ ಕಾರಣದಿಂದ ಮಕ್ಕಳು ತಮ್ಮ ಸ್ವಂತ ಕೂದಲನ್ನು ತಾವೇ ಕಿತ್ತು ನುಂಗುವ ವಿಚಿತ್ರ ಅಭ್ಯಾಸವನ್ನು ಇದು ಒಳಗೊಂಡಿದೆ.
ಹೀಗೆ ತಿನ್ನುವ ಕೂದಲು ತಿಂಗಳುಗಟ್ಟಲೆ ಹೊಟ್ಟೆಯಲ್ಲೇ ಉಳಿದುಕೊಂಡು, ಜೀರ್ಣವಾಗದೆ ಕರುಳಿನಲ್ಲಿ ದಪ್ಪನಾದ ಗಡ್ಡೆಯಂತೆ ಅಡೆತಡೆಯನ್ನು ಉಂಟುಮಾಡುತ್ತದೆ. ಬಾಲಕಿಯ ಹೊಟ್ಟೆಯಲ್ಲಿ ಸಂಗ್ರಹವಾಗಿದ್ದ ಈ ದೈತ್ಯ ಕೂದಲಿನ ಗುಂಪನ್ನು ತಿರುವನಂತಪುರಂನ ಎನ್‌ಐಎಂಎಸ್ ಮೆಡಿಸಿಟಿಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಹಿರಿಯ ಸಲಹೆಗಾರ ಡಾ. ಬಿಜು ಐ.ಜಿ. ನಾಯರ್ ನೇತೃತ್ವದ ವೈದ್ಯರ ತಂಡವು ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದೆ.
ಶಸ್ತ್ರಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಎಂದಿನಂತೆ ಸಾಮಾನ್ಯ ಆಹಾರ ಸೇವಿಸಲು ಆರಂಭಿಸಿದೆ ಎಂದು ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ. ಕಾಯಿಲೆಯ ತೀವ್ರತೆ ಹಾಗೂ ವಿಶಿಷ್ಟತೆಯ ಬಗ್ಗೆ ವೈದ್ಯರು ಪೋಷಕರಿಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ವೈದ್ಯಕೀಯ ವಿಜ್ಞಾನದ ಪ್ರಕಾರ, ರಾಪುಂಜೆಲ್ ಸಿಂಡ್ರೋಮ್ (Rapunzel Syndrome) ಎನ್ನುವುದು ಮಾನಸಿಕ ಒತ್ತಡ ಅಥವಾ ಅಭದ್ರತೆಯಿಂದ ಬಳಲುವ ಮಕ್ಕಳು ತಮ್ಮ ಸ್ವಂತ ಕೂದಲನ್ನು ತಾವೇ ಕಿತ್ತು ನುಂಗುವ ವಿಚಿತ್ರ ಮತ್ತು ಅತ್ಯಂತ ಅಪರೂಪವಾದ ಮಾನಸಿಕ ಹಾಗೂ ದೈಹಿಕ ಸ್ಥಿತಿಯಾಗಿದೆ. ಹೀಗೆ ನುಂಗಿದ ಕೂದಲು ಜೀರ್ಣವಾಗದೆ ತಿಂಗಳುಗಟ್ಟಲೆ ಹೊಟ್ಟೆ ಹಾಗೂ ಸಣ್ಣ ಕರುಳಿನಲ್ಲಿ ದಪ್ಪನಾದ ಉಂಡೆಯಾಗಿ ಶೇಖರಗೊಳ್ಳುತ್ತದೆ. ಇದು ಸಾಮಾನ್ಯವಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ವಿರಳವಾದ ಸಮಸ್ಯೆಯಾಗಿದ್ದು, ತೀವ್ರವಾದ ಹೊಟ್ಟೆನೋವು ಮತ್ತು ವಾಂತಿಗೆ ಕಾರಣವಾಗುವುದರಿಂದ ಶಸ್ತ್ರಚಿಕಿತ್ಸೆಯ ಮೂಲಕವೇ ಅದನ್ನು ಹೊರತೆಗೆಯಬೇಕಾಗುತ್ತದೆ, (ಏಜೆನ್ಸೀಸ್).