ಮುಂಬೈನಲ್ಲಿ ATS ವಶಕ್ಕೆ ಪಡೆದ ಜೈಶ್-ಎ-ಮೊಹಮ್ಮದ್ ಶಂಕಿತ ಉಗ್ರ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ 
ದೇಶ

ಹಗಲಿನಲ್ಲಿ ರಾಪಿಡೋ ರೈಡರ್, ರಾತ್ರಿಯಲ್ಲಿ ಡಿಜಿಟಲ್ ಜಿಹಾದಿ: ಮುಂಬೈನಲ್ಲಿ ಶಂಕಿತ ಉಗ್ರ ಅರೆಸ್ಟ್! Terrorist Arrested

ಪ್ರಧಾನಿ ಮೋದಿ ಹತ್ಯೆಗೆ ಕರೆ ನೀಡಿ, ಯುವಕರನ್ನು ಜಿಹಾದ್‌ಗೆ ಪ್ರಚೋದಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ಶಂಕಿತ ಉಗ್ರನನ್ನು ಮುಂಬೈ ATS ಬಂಧಿಸಿದೆ. ಹಗಲಿನಲ್ಲಿ ಈತ ರಾಪಿಡೋ ರೈಡರ್ ಆಗಿದ್ದ ಎಂಬ ಶಾಕಿಂಗ್​ ಸಂಗತಿ ಬಯಲಾಗಿದೆ.

ಮುಂಬೈ: ಮಾಯಾನಗರಿ ಮುಂಬೈನಲ್ಲಿ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ಜೊತೆ ನಂಟು ಹೊಂದಿರುವ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದೆ.

ಬಂಧಿತ ಆರೋಪಿ, ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಿದ್ದಲ್ಲದೆ, ಯುವಕರು ಶಸ್ತ್ರಾಸ್ತ್ರ ಹಿಡಿದು ಜಿಹಾದ್ ನಡೆಸುವಂತೆ ನಿರಂತರವಾಗಿ ಪ್ರಚೋದಿಸುತ್ತಿದ್ದ ಎಂದು ತನಿಖೆಯಲ್ಲಿ ಬಯಲಾಗಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ (33) ಎಂದು ಗುರುತಿಸಲಾಗಿದ್ದು, ಮುಂಬೈನ ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ATS ಈತನನ್ನು ಹೆಡೆಮುರಿ ಕಟ್ಟಿದೆ.

ಹಗಲಿನಲ್ಲಿ ರಾಪಿಡೋ ರೈಡರ್, ರಾತ್ರಿಯಲ್ಲಿ ಡಿಜಿಟಲ್ ಜಿಹಾದಿ!

ಮೇಲ್ನೋಟಕ್ಕೆ ಈತ ಸಾಮಾನ್ಯ ಜೀವನ ನಡೆಸುತ್ತಿದ್ದ. ಹಗಲಿನಲ್ಲಿ ಮುಂಬೈ ರಸ್ತೆಗಳಲ್ಲಿ ರಾಪಿಡೋ ಬೈಕ್ ರೈಡರ್ ಆಗಿ ಹಾಗೂ ಸುಗಂಧ ದ್ರವ್ಯ (ಪರ್ಫ್ಯೂಮ್) ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಟ್ವಿಟರ್, ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್‌ಗಳಲ್ಲಿ ನಕಲಿ ಹಾಗೂ ಸ್ವಂತ ಖಾತೆಗಳನ್ನು ಬಳಸಿಕೊಂಡು ಯುವಕರ ತಲೆಕೆಡಿಸುವುದು, ಕೋಮು ದ್ವೇಷ ಬಿತ್ತುವುದು ಮತ್ತು ದೇಶವಿರೋಧಿ ಭಾವನೆಗಳನ್ನು ಹರಡುವುದೇ ಈತನ ಮುಖ್ಯ ಕೆಲಸವಾಗಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇಂದಿರಾ ಗಾಂಧಿ ಹತ್ಯೆ ಉಲ್ಲೇಖ: ಪಿಎಂ ಮೋದಿ ಹತ್ಯೆಗೆ ಸಂಚು?

ತನಿಖಾ ಸಂಸ್ಥೆಗಳು ಆರೋಪಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಯ ಸಂದರ್ಭದಲ್ಲಿ, ಬಿಕೆಸಿ (BKC) ಕಾರ್ಯಕ್ರಮದ ಬಳಿ ಶಸ್ತ್ರಾಸ್ತ್ರ ಹೊಂದಿದ್ದ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದ ವರದಿಯೊಂದರ ಅಡಿಯಲ್ಲಿ ಈತ ಕಮೆಂಟ್ ಮಾಡಿದ್ದ. "ಇಂದಿರಾ ಗಾಂಧಿಯವರಂತೆ ಮೋದಿಯವರ ವಿಷಯದಲ್ಲೂ ಏನಾದರೂ ಮಾಡಬೇಕಿತ್ತು" ಎಂದು ಬರೆದಿದ್ದ. 1984 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ರೀತಿಯಲ್ಲೇ ಪ್ರಧಾನಿ ಮೋದಿ ಅವರ ಮೇಲೂ ಮಾರಣಾಂತಿಕ ದಾಳಿ ನಡೆಸುವಂತೆ ಈತ ಬಹಿರಂಗವಾಗಿ ಕರೆ ನೀಡಿದ್ದ ಎಂದು ಎಟಿಎಸ್ ದಾಖಲಿಸಿದೆ.

ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಮುಸ್ಲಿಂ ಯುವಕರಿಗೆ ಕರೆ

ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿದ್ದ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕಮಲ್ ಮೌಲಾ ಮಸೀದಿ ತೀರ್ಪಿನ ವರದಿಯ ಕೆಳಗೆ "ಅಬ್ ಜಿಹಾದ್ ಕಾ ಜಮಾನಾ ಆಗ್ಯಾ ಹೈ" (ಈಗ ಜಿಹಾದ್‌ಗೆ ಸಮಯ ಬಂದಿದೆ) ಎಂದು ಬರೆದಿದ್ದ.

ಒಡಿಶಾದ ಶೌರ್ಯ ತರಬೇತಿ ಶಿಬಿರದ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, "ಪ್ರತಿಯೊಬ್ಬ ಮುಸ್ಲಿಮರೂ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಮತ್ತು ಅದನ್ನು ಕೈಗೆತ್ತಿಕೊಳ್ಳಬೇಕು" ಎಂದು ವಿಷಕಾರಿದ್ದ. 600 ವರ್ಷಗಳ ಹಳೆಯ ಶಾಹಿ ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ, "ಭಾರತದಲ್ಲಿ ಇಸ್ಲಾಂ, ಮಸೀದಿ, ಮದರಸಾಗಳನ್ನು ಉಳಿಸಿಕೊಳ್ಳಲು ಅಲ್ಲಾಹನಿಗಾಗಿ ಜಿಹಾದ್ ಮಾಡಿ" ಎಂದು ಯುವಕರನ್ನು ಪ್ರಚೋದಿಸಿದ್ದ.

ರಾಜಸ್ಥಾನದ ಘಟನೆಯೊಂದರ ವರದಿಗೆ "ನಾವು ಭಯೋತ್ಪಾದಕರಾದರೆ, ಆಗ ಇವರಿಗೆ ತೊಂದರೆ ಶುರುವಾಗುತ್ತದೆ" ಎಂದು ಬರೆದು ಬೆದರಿಕೆ ಹಾಕಿದ್ದ. ಕರ್ನಾಲ್ ಬಸ್ ದಾಳಿಯ ಘಟನೆಯ ನಂತರ "ಕಾಶ್ಮೀರದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಿಷೇಧಿಸಿ" ಎಂದೂ ಬರೆದಿದ್ದ.

ಜೈಶ್-ಎ-ಮೊಹಮ್ಮದ್ ಜಾಲ ಮತ್ತು ಪಾಕಿಸ್ತಾನ ಲಿಂಕ್!

ಕೇವಲ ಕಾಮೆಂಟ್ ಮಾಡುವುದಷ್ಟೇ ಅಲ್ಲದೆ, ಈತ ಪಾಕಿಸ್ತಾನ ಬೆಂಬಲಿತ 'ಐಬಿಎನ್-ಇ-ಖಾಸಿಮ್' (Ibn-e-Qasim) ಎಂಬ ತೀವ್ರಗಾಮಿ ಟೆಲಿಗ್ರಾಮ್ ಚಾನೆಲ್‌ನಲ್ಲಿ ಸಕ್ರಿಯ ಸದಸ್ಯನಾಗಿದ್ದ. ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್‌ನ ಆಡಿಯೋ ಭಾಷಣಗಳನ್ನು ತನ್ನ ಟೆಲಿಗ್ರಾಮ್ ಗ್ರೂಪ್‌ಗಳಿಗೆ ಅಪ್‌ಲೋಡ್ ಮಾಡಿ ಪ್ರಚಾರ ಮಾಡುತ್ತಿದ್ದ.

ಆರೋಪಿಯ ಮೊಬೈಲ್ ಫೋನ್‌ನಿಂದ ಅಪಾರ ಪ್ರಮಾಣದ ದೇಶದ್ರೋಹಿ ಸಾಹಿತ್ಯ, ವಿಡಿಯೋಗಳು ಮತ್ತು ಪ್ರಚೋದನಕಾರಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಹಿಂದೆ ಬೇರೆ ಯಾರಾದರೂ ಸ್ಲೀಪರ್ ಸೆಲ್ ಸದಸ್ಯರಿದ್ದಾರಾ? ಇವನಿಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತಿತ್ತು? ಎಂಬ ಬಗ್ಗೆ ಮಹಾರಾಷ್ಟ್ರ ಎಟಿಎಸ್ ತೀವ್ರ ತನಿಖೆ ಮುಂದುವರಿಸಿದೆ, (ಏಜೆನ್ಸೀಸ್​).