

ಮುಂಬೈ: ಬಾಲಿವುಡ್ ನಟ ಹಾಗೂ ಆಕ್ಷನ್ ಹೀರೋ ಖ್ಯಾತಿಯ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಆದರೆ, ಈ ಘಟನೆಯಿಂದ ಇಡೀ ಬಾಲಿವುಡ್ ಬೆಚ್ಚಿಬಿದ್ದಿರುವುದಂತೂ ಅಕ್ಷರಶಃ ನಿಜವಾಗಿದೆ.
ಈ ದಾಳಿಯ ಜವಾಬ್ದಾರಿ ಹೊತ್ತಿರುವ ಬಿಷ್ಣೋಯ್ ಗ್ಯಾಂಗ್ ಮತ್ತು ನಟ ಸಲ್ಮಾನ್ ಖಾನ್ ಅವರ ಸಂಬಂಧ ಸರಿಯಿಲ್ಲ. ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಗೂ ಭಾಯ್ಜಾನ್ ಆಪ್ತರ ಮೇಲೆ ದಾಳಿಯನ್ನು ಈ ಬಿಷ್ಣೋಯ್ ಗ್ಯಾಂಗ್ ನಡೆಸುತ್ತಲೇ ಇದೆ.
ಆದರೆ, ಟೈಗರ್ ಶ್ರಾಫ್, ನಟ ಸಲ್ಮಾನ್ ಜೊತೆ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಅಂತಯೇ, ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಕೂಡ ಟೈಗರ್ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೂ, ಬಿಷ್ಣೋಯ್ ಗ್ಯಾಂಗ್ ಟೈಗರ್ನನ್ನು ಏಕೆ ಗುರಿಮಾಡಿತು ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತಲೇ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಲಭ್ಯವಾಗಿದೆ.
ಈದೀಗ, ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿ, ನೇಪಾಳಕ್ಕೆ ಪರಾರಿಯಾಗ ಹೊರಟಿದ್ದ ಮೂವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಮೂವರಲ್ಲಿ ಒಬ್ಬ, ನಟ ಟೈಗರ್ನನ್ನೇ ಏಕೆ ಗುರಿ ಮಾಡಿಕೊಂಡಿದ್ದಾಗಿ ಮಾಹಿತಿ ನೀಡಿದ್ದಾನೆಂದು ತಿಳಿದುಬಂದಿದೆ.
ಬಲ್ಲ ಮೂಲಗಳ ಪ್ರಕಾರ, 2022 ರಲ್ಲಿ ತಮ್ಮ ಸಿನಿಮಾ ಹಿರೋಪಂತಿ 2 ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಟೈಗರ್ ಶ್ರಾಫ್, ಸಲ್ಮಾನ್ ಅಭಿನಯದ ಭಜರಂಗಿ ಭಾಯ್ಜಾನ್ ಸಿನಿಮಾವನ್ನು ಹೊಗಳುತ್ತಾ, ಸಲ್ಮಾನ್ ಖಾನ್ ಒಬ್ಬರೇ ನಿಜವಾದ ಟೈಗರ್ (ಹುಲಿ) ಅವರೊಬ್ಬರೇ, ಚಿತ್ರರಂಗದಲ್ಲಿರುವ ನಿಜವಾದ ಹುಲಿ ಎಂದು ಹೊಗಳಿದ್ದರಂತೆ.
ಈ ಘಟನೆ ಬಿಷ್ಣೋಯ್ ಗ್ಯಾಂಗ್ನ ಗಮನಕ್ಕೆ ಬಂದಿದೆ. ಹೀಗಾಗಿ ಅವರು ನಟ ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆಂದು ಬಂಧಿತ ಆರೋಪಿಗಳಲ್ಲಿ ಒಬ್ಬಾತ ಪೊಲೀಸರಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆಂದು ತಿಳಿದುಬಂದಿದೆ.
ಅಕ್ಟೋಬರ್ 18 ರಂದು ಜುಹುವಿನಲ್ಲಿರುವ ಫುಟ್ಬಾಲ್ ಕ್ಲಬ್ನಲ್ಲಿ ಆಟ ಮುಗಿಸಿಕೊಂಡು ಕಾರನ್ನೇರಿ ಮನೆಯತ್ತ ಹೊರಟ್ಟಿದ್ದ ನಟ ಟೈಗರ್ ಶ್ರಾಫ್ ಮೇಲೆ ಇಬ್ಬರು ದುಷ್ಕರ್ಮಿಗಳು ಸುಮಾರು 5-7 ಸುತ್ತು ಗುಂಡನ್ನು ಹಾರಿಸಿದ್ದರು. ಈ ಘಟನೆಯಲ್ಲಿ ನಟ ಟೈಗರ್ ಶ್ರಾಫ್ಗೆ ಅಷ್ಟೇನು ಗಾಯವಾಗದಿದ್ದರೂ, ಡ್ರೈವರ್ ಮತ್ತು ಇನ್ನೊಬ್ಬ ವ್ಯಕ್ತಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಟನ ಮೇಲೆ ಗುಂಡಿನ ದಾಳಿ ನಡೆಸಿ, ಅಂಧೇರಿತಿಂದ ಸೂರತ್, ಕೋಟಾ ಮಾರ್ಗವಾಗಿ ನೇಪಾಲ ತಲುಪಿ ಅಲ್ಲಿಂದ ಕೆನಡಾಗೆ ಪರಾರಿಯಾಗುವುದು ದಾಳಿಕೋರರ ಯೋಜನೆಯಾಗಿತ್ತು. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು, ರಾಜಸ್ಥಾನ್ ಹಾಗೂ ಗುಜರಾತ್ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಕೋಟಾ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ಮುಂಬೈಗೆ ವಿಚಾರಣೆಗೆ ಕರೆತಂದಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಕ್ಟೋಬರ್ 31 ರ ವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಪೊಲೀಸ್ ವಿಚಾರಣೆ ಮುಂದುವರಿದಿದೆ, (ಏಜೆನ್ಸೀಸ್).