ಲಖನೌ: ಅಯೋಧ್ಯೆಯ ರಾಮಮಂದಿರದಲ್ಲಿ ಕಳ್ಳತನ ವಿವಾದ ಹಿನ್ನೆಲೆಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಮತ್ತು ಸದಸ್ಯ ಡಾ. ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್(Ram Mandir Trust) ಶನಿವಾರ(ಜೂ. 27) ದೃಢಪಡಿಸಿದೆ.
ಈ ಕುರಿತು ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ದೇಣಿಗೆ ಕಳ್ಳತನ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುವಂತೆ ನೋಡಿಕೊಳ್ಳಲು ಇಬ್ಬರೂ ನಾಯಕರು ರಾಜೀನಾಮೆ ನೀಡಿದ್ದಾರೆ. ಘಟನೆಯ ಬಗ್ಗೆ ಟ್ರಸ್ಟ್ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ರಾಮ ಭಕ್ತರ ವಿಶ್ವಾಸವನ್ನು ಪುನಃಸ್ಥಾಪಿಸಲು ಟ್ರಸ್ಟ್ ಬದ್ಧವಾಗಿದೆ. ಶ್ರೀ ಚಂಪತ್ ರಾಯ್ ಮತ್ತು ಟ್ರಸ್ಟಿ ಶ್ರೀ ಅನಿಲ್ ಮಿಶ್ರಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಟ್ರಸ್ಟ್ ತನ್ನ ಮುಂದಿನ ಸಭೆಯಲ್ಲಿ ಅವರ ರಾಜೀನಾಮೆಗಳನ್ನು ಪರಿಗಣಿಸುತ್ತದೆ. ಹಾಗೆಯೇ
ಭಕ್ತರಿಗೆ ಸುರಕ್ಷಿತ ದೇಣಿಗೆ ಲೆಕ್ಕಪತ್ರದ ಭರವಸೆಯನ್ನು ಟ್ರಸ್ಟ್ ನೀಡುತ್ತದೆ ಎಂದು ಹೇಳಿದ್ದಾರೆ.
ಭಕ್ತರು ಸಂಸ್ಥೆಯ ಮೇಲೆ ನಂಬಿಕೆ ಇಡಬೇಕೆಂದು ಮನವಿ ಮಾಡಿರುವ ಅವರು, ಭಕ್ತರು ದಾನ ಮಾಡಿದ ಎಲ್ಲಾ ಕಾಣಿಕೆಗಳು ಮತ್ತು ಆಭರಣಗಳನ್ನು ಸುರಕ್ಷಿತವಾಗಿ ಲೆಕ್ಕಹಾಕಲಾಗಿದೆ. ಮತ್ತು ಸರಿಯಾದ ದಾಸ್ತಾನು ಅಸ್ತಿತ್ವದಲ್ಲಿದೆ. ದೇಣಿಗೆಗಳ ದುರುಪಯೋಗದ ಆರೋಪದ ಕುರಿತು ಟ್ರಸ್ಟ್ ಕೋರಿಕೆಯ ಮೇರೆಗೆ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮಗಳು ನಡೆಯುತ್ತಿವೆ ಎಂದಿದ್ದಾರೆ.
ಯಾವುದೇ ತಪ್ಪಿತಸ್ಥ ವ್ಯಕ್ತಿ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಯಾವುದೇ ಪ್ರಯತ್ನವನ್ನು ಕೈಬಿಡುವುದಿಲ್ಲ. ಸನಾತನ ಧರ್ಮವನ್ನು ಕೆಣಕುವ ವದಂತಿಗಳು ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಪ್ರಯತ್ನಗಳಿಗೆ ಜನರು ಬಲಿಯಾಗಬಾರದು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಎಸ್‌ಐಟಿಯ ಪ್ರಾಥಮಿಕ ಸಂಶೋಧನೆಗಳ ನಂತರ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ರಾಮ ಮಂದಿರ ಚಳವಳಿಯ ಪ್ರಮುಖ ವ್ಯಕ್ತಿಗಳಲ್ಲಿ ಚಂಪತ್ ರಾಯ್ ಒಬ್ಬರಾಗಿದ್ದು, ಫೆಬ್ರವರಿ 2020 ರಲ್ಲಿ ಟ್ರಸ್ಟ್ ರಚನೆಯಾದಾಗಿನಿಂದ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅನಿಲ್ ಮಿಶ್ರಾ ಅವರು ದೇವಾಲಯ ಯೋಜನೆಗೆ ಸಂಬಂಧಿಸಿದ ಪ್ರಮುಖ ಟ್ರಸ್ಟಿಯಾಗಿದ್ದರು (ಏಜೆನ್ಸೀಸ್).