ಚಂಪತ್ ರಾಯ್ 
ದೇಶ

ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ: ತಮ್ಮ ವಿರುದ್ಧದ ಆರೋಪ ಆಧಾರರಹಿತ: ಚಂಪತ್ ರಾಯ್ ಮೊದಲ ಪ್ರತಿಕ್ರಿಯೆ | Champat Rai

ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮಾಜಿ ಮುಖ್ಯಸ್ಥ ಚಂಪತ್ ರಾಯ್(Champat Rai) ಅವರು ಮಂಗಳವಾರ(ಜು. 07) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಿರುದ್ಧದ ಆರೋಪ ಆಧಾರರಹಿತ, ಶೀಘ್ರದಲ್ಲೇ ಎಲ್ಲವೂ ತಿಳಿಯಲಿದೆ ಎಂದು ಹೇಳಿದ್ದಾರೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ 10 ದಿನಗಳ ಬಳಿಕ ರಾಮ ಭಕ್ತರಿಗಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇವಾಲಯದ ದೇಣಿಗೆ ಕಳ್ಳತನ ಸಂಬಂಧ ನನ್ನ ಮೇಲೆ ವೈಯಕ್ತಿಕವಾಗಿ ಆರೋಪ ಮಾಡಲಾಗುತ್ತಿದೆ. ನಾನು ಉದ್ದೇಶಪೂರ್ವಕವಾಗಿ ಮೌನ ವಹಿಸಿದ್ದೇನೆ. ತನಿಖೆ ನಡೆಸುತ್ತಿರುವ ಎಸ್​ಐಟಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ಬಳಿಕ ವಿವರವಾಗಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.
ಟ್ರಸ್ಟ್​ನಲ್ಲಿ ನಡೆದಿರುವ ಅಕ್ರಮಗಳನ್ನು ಪರಿಶೀಲಿಸುತ್ತಿರುವ ಎಸ್​ಐಟಿಯ ಗೌಪ್ಯ ವರದಿ ಸಾರ್ವಜನಿಕವಾಗಿ ಹರಿಬಿಡಲಾಗುತ್ತಿದೆ. ಎಸ್‌ಐಟಿ ಅಂತಿಮ ವರದಿಯನ್ನು ಸಲ್ಲಿಸಿದ ನಂತರ ಪ್ರತಿಯೊಂದು ಆರೋಪವನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ತನಿಖೆ ಪೂರ್ಣಗೊಂಡ ನಂತರ ಸತ್ಯ ಹೊರಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಸಮಗ್ರತೆಯನ್ನು ಸಮರ್ಥಿಸಿಕೊಂಡ ಚಂಪರ್ ರಾಯ್ ಅವರು, 1991 ಅಕ್ಟೋಬರ್​ನಲ್ಲಿ ಅಯೋಧ್ಯೆಗೆ ನಿಯೋಜನೆಗೊಂಡು ಅಲ್ಲಿಂದ ಕಳೆದ 45 ವರ್ಷಗಳಿಂದ ಪೂರ್ಣ ಸಮಯದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸಾರ್ವಜನಿಕ ಜೀವನವು ತೆರದ ಪುಸ್ತಕದಂತಿದೆ ಎಂದಿದ್ದಾರೆ. 
ಇನ್ನೂ ನಿನ್ನೆ ನಡೆದ ಟ್ರಸ್ಟ್​ನ ಸಭೆಯಲ್ಲಿ ಚಂಪತ್ ರಾಯ್, ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಮತ್ತು ಅವರ ನಿರ್ಗಮನವನ್ನು ಟ್ರಸ್ಟ್ ದೃಢಪಡಿಸಿದೆ. ಅವರು ಇನ್ನು ಮುಂದೆ ಟ್ರಸ್ಟ್‌ನ ಸದಸ್ಯರಲ್ಲ ಎಂದು ತಿಳಿಸಿದೆ (ಏಜೆನ್ಸೀಸ್).