ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ಕಾಣಿಕೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ಎರಡು ವಾರಗಳಲ್ಲಿ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ(ಜು. 27) ಸೂಚನೆ ನೀಡಿದೆ.
ಕಳ್ಳತನ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್, ನ್ಯಾ. ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರಿದ್ದ ಪೀಠವು ಈ ನಿರ್ದೇಶನವನ್ನು ನೀಡಿದೆ.
ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ ಸೂಚಿಸಿದಂತೆ, ಪ್ರಸ್ತುತ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡಿರುವ ಎಸ್‌ಐಟಿಯನ್ನು ಪುನರ್ರಚಿಸಿದ್ದು, ವಿಧಿವಿಜ್ಞಾನ ಲೆಕ್ಕಪರಿಶೋಧಕರನ್ನು ಸೇರಿಸುವುದಾಗಿ ಪೀಠಕ್ಕೆ ತಿಳಿಸಿತು. ಈ ಹಿನ್ನೆಲೆ ನ್ಯಾಯಾಲಯವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
ಶನಿವಾರ(ಜು. 25) ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಐಜಿ ಕಿರಣ್ ಎಸ್ ನೇತೃತ್ವದಲ್ಲಿ ಡಿಐಜಿ ಅಯೋಧ್ಯೆ ಸೋಮೆನ್ ವರ್ಮಾ ಮತ್ತು ಎಸ್‌ಎಸ್‌ಪಿ ಅಯೋಧ್ಯೆ ಡಾ. ಗೌರವ್ ಗ್ರೋವರ್ ಅವರನ್ನೊಳಗೊಂಡು ಹೊಸ ಎಸ್‌ಐಟಿ ತಂಡವನ್ನು ಯುಪಿ ಸರ್ಕಾರ ಪುನರ್ರಚಿಸಿತ್ತು. ಹಿಂದಿನ ಎಸ್‌ಐಟಿಯಲ್ಲಿ ಲಕ್ನೋ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಕುಮಾರ್ ಮತ್ತು ಇತರ ಅಧಿಕಾರಿಗಳು ಇದ್ದರು.
ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಹಿಂದಿನ ಎಸ್‌ಐಟಿ ತಂಡ, ವ್ಯಾಪಕ ತನಿಖೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು, ದೇಣಿಗೆ ನೋಂದಣಿ ದಾಖಲೆಗಳು, ನಗದು ನಿರ್ವಹಣೆ ಕಾರ್ಯವಿಧಾನಗಳು ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸಿದೆ. ಹಲವಾರು ದೇವಸ್ಥಾನದ ನೌಕರರ ಪ್ರಶ್ನಿಸಿದ್ದು, ಕಾಣಿಕೆಗಳ ಎಣಿಕೆ ಮತ್ತು ಠೇವಣಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಸೂಚಿಸುವ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಇನ್ನೂ ತನಿಖೆಯ ಆಧಾರದ ಮೇಲೆ ಟಿನ್ನು ಯಾದವ್, ಮಿಶ್ರಾ ಸೇರಿದಂತೆ 13ಕ್ಕೂ ಹೆಚ್ಚು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದುರುಪಯೋಗಪಡಿಸಿಕೊಂಡ ಹಣವನ್ನು ಬಳಸಿಕೊಂಡು ಖರೀದಿಸಲಾಗಿದೆ ಎನ್ನಲಾದ ನಗದು, ವಾಹನಗಳು, ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ (ಏಜೆನ್ಸೀಸ್).