ರಾಮಮಂದಿರ ದೇಣಿಗೆ ವಂಚನೆ ಪ್ರಕರಣ: 8 ಜನ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ! 
ದೇಶ

ರಾಮಮಂದಿರ ದೇಣಿಗೆ ವಂಚನೆ ಪ್ರಕರಣ: 8 ಜನ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ! Ram Mandir Donation Scam

ಅಯೋಧ್ಯೆ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ಹಣ ಮತ್ತು ಚಿನ್ನಾಭರಣ ದುರುಪಯೋಗ(Ram Mandir Donation Scam) ಪ್ರಕರಣದ 8 ಜನ ಆರೋಪಿಗಳನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳ ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ತನಿಖಾಧಿಕಾರಿಗಳು ಸೋಮವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳಿಗೆ ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ

ರಾಮಮಂದಿರಕ್ಕೆ ಭಕ್ತರು ನೀಡಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಮತ್ತು ಬೆಲೆಬಾಳುವ ವಸ್ತುಗಳು ವ್ಯವಸ್ಥಿತವಾಗಿ ದುರುಪಯೋಗವಾಗಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್‌ನ ಪ್ರಮುಖ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಈ ಹಗರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಜೂನ್ 13 ರಂದೇ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಲಕ್ನೋ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನೊಳಗೊಂಡ ಈ ಉನ್ನತ ಮಟ್ಟದ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಕಳೆದ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿ ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಿದ್ದರು. ತನಿಖೆಯ ಭಾಗವಾಗಿ ಇತ್ತೀಚೆಗೆ ಆರೋಪಿಗಳ ಮನೆಗಳ ಮೇಲೆಯೂ ಏಕಕಾಲಕ್ಕೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪರ ವಕಾಲತ್ತು ವಹಿಸಲ್ಲ: ಅಯೋಧ್ಯೆ ಬಾರ್ ಅಸೋಸಿಯೇಷನ್ ನಿರ್ಧಾರ

ಪ್ರಕರಣದ ತೀವ್ರತೆಯನ್ನು ಪರಿಗಣಿಸಿರುವ ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಮಂದಿರದ ಹೆಸರಿನಲ್ಲಿ ವಂಚನೆ ಮಾಡಿದ ಯಾವುದೇ ಆರೋಪಿಗಳ ಪರವಾಗಿ ನಮ್ಮ ಸಂಘದ ಯಾವೊಬ್ಬ ವಕೀಲರೂ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದು ವಕೀಲರ ಸಂಘ ಒಮ್ಮತದ ತೀರ್ಮಾನ ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಈ ನಿರ್ಣಯವನ್ನು ಉಲ್ಲಂಘಿಸಿ ಯಾರಾದರೂ ಆರೋಪಿಗಳ ಪರ ನ್ಯಾಯಾಲಯಕ್ಕೆ ಹಾಜರಾದರೆ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ, ವಕೀಲರ ಸಂಘವು ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಗುರುತಿಸಿಕೊಂಡಿರುವ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ವಿರುದ್ಧವೂ ತಿರುಗಿಬಿದ್ದಿದೆ. ಈ ಮೂವರ ಹೆಸರು ಸದ್ಯಕ್ಕೆ ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ, ಮಂದಿರದ ಆಡಳಿತದ ಜವಾಬ್ದಾರಿ ಇವರದ್ದೇ ಆಗಿರುವುದರಿಂದ ಇವರು ಮೂರು ದಿನಗಳ ಒಳಗಾಗಿ ಅಯೋಧ್ಯೆಯನ್ನು ತೊರೆಯಬೇಕು ಎಂದು ವಕೀಲರು ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಇಡೀ ಅಯೋಧ್ಯೆ ನಗರವನ್ನು ಬಂದ್ ಮಾಡಿ, ಯಾರೂ ನಗರ ಪ್ರವೇಶಿಸದಂತೆ ತಡೆಯೊಡ್ಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ವಕೀಲರು ಎಚ್ಚರಿಸಿದ್ದಾರೆ.

ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

ರಾಮಮಂದಿರ ದೇಣಿಗೆ ಹಗರಣದ ಬಗ್ಗೆ ಸುಪ್ರೀಂ ಉಸ್ತುವಾರಿಯಲ್ಲಿ ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠವು, ಈ ಪ್ರಕರಣದ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಸುಪ್ರೀಂನ ಬೇಸಿಗೆ ರಜೆಯ ನಂತರ ಈ ಅರ್ಜಿಯನ್ನು ನಿಯಮಿತವಾಗಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಕೋಟ್ಯಂತರ ಭಕ್ತರ ಆಸ್ತಿಯಾಗಿರುವ ರಾಮಮಂದಿರದ ಹೆಸರಿನಲ್ಲೇ ನಡೆದಿರುವ ಈ ವಂಚನೆ ಸದ್ಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್​).