ರಾಘವ್ ಚಡ್ಡಾ ಸೇರಿ ಆಪ್​ ಸಂಸದರು ಬಿಜೆಪಿ ಸೇರ್ಪಡೆಗೊಂಡಿರುವುದು.  
ದೇಶ

ಆಪ್​ನ 7 ಸಂಸದರು ಬಿಜೆಪಿಯಲ್ಲಿ ವಿಲೀನಗೊಳ್ಳುವುದನ್ನು ಅನುಮೋದಿಸಿದ ರಾಜ್ಯಸಭಾ ಸಭಾಪತಿ | Rajya Sabha Chairman

ನವದೆಹಲಿ: ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದ ಆಪ್​ನ ಏಳು ಮಂದಿ ರಾಜ್ಯಸಭಾ ಸಂಸದರನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ರಾಜ್ಯಸಭಾ ಸಭಾಪತಿ ಸೋಮವಾರ(ಏ. 27) ಔಪಚಾರಿಕವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಇದರಿಂದ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 113ಕ್ಕೆ ಏರಿಕೆಯಾದ್ರೆ, ಆಪ್​ನ ಸಂಖ್ಯೆ ಮೂರಕ್ಕೆ ಕುಸಿದಿದೆ.
ಏಪ್ರಿಲ್ 24ರಂದು ಆಪ್​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ವಿಕ್ರಮ್‌ಜಿತ್ ಸಿಂಗ್ ಸಹ್ನಿ ಹಾಗೂ ರಾಜಿಂದರ್ ಗುಪ್ತಾ ಬಿಜೆಪಿ ಸೇರ್ಪಡೆಯಾಗಿದ್ದರು.
ಸಂವಿಧಾನದ ಹತ್ತನೇ ವೇಳಾಪಟ್ಟಿಯ ಅಡಿಯಲ್ಲಿ ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಅನರ್ಹತೆಯನ್ನು ಎದುರಿಸದೆ ಮತ್ತೊಂದು ಪಕ್ಷದೊಂದಿಗ ವಿಲೀನಗೊಳ್ಳಲು ಅವಕಾಶ ನೀಡುತ್ತದೆ ಎಂದು ಸಂಸದರು ರಾಘವ್ ಚಡ್ಡಾ ತಮ್ಮ ಪಕ್ಷಾಂತರದ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ಇನ್ನೂ ಆಪ್​ ಪಕ್ಷವೂ ಏಳು ಸಂಸದರನ್ನು ಪಕ್ಷಾಂತರ ವಿರೋಧಿ ಕಾನೂನು ಅಡಿ ತಕ್ಷಣ ಅನರ್ಹಗೊಳಿಸುವಂತೆ ಕೋರಿ ರಾಜ್ಯಸಭಾ ಸಭಾಪತಿಗೆ ಔಪಚಾರಿಕ ಅರ್ಜಿಯನ್ನು ಸಲ್ಲಿಸಿದೆ. ಮೂಲ ರಾಜಕೀಯ ಪಕ್ಷದ ಒಪ್ಪಿಗೆಯಿಲ್ಲದೆ ಶಾಸಕಾಂಗ ವಿಲೀನವನ್ನು ಗುರುತಿಸಲು ಸಾಧ್ಯವಿಲ್ಲ. ಶಾಸಕಾಂಗ ವಿಭಾಗದ ವಿಲೀನದ ಹಕ್ಕು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಎಎಪಿ ವಾದಿಸಿದೆ. ಪಕ್ಷವು ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದೆ (ಏಜೆನ್ಸೀಸ್).