Shiv Sena Split | ಠಾಕ್ರೆ ಕೋಟೆಗೆ ಕಾಲಕಾಲಕ್ಕೆ ಕೊಳ್ಳಿ ಇಟ್ಟ ನಾಯಕರುಗಳು ಪಟ್ಟಿ ಇಲ್ಲಿದೆ ನೋಡಿ
Shiv Sena Split: ಮಹಾರಾಷ್ಟ್ರದ ವಿರೋಧ ಪಕ್ಷದ ಪಾಳಯದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುವ ಮುನ್ಸೂಚನೆ ಸಿಗುತ್ತಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಪಕ್ಷಕ್ಕೆ ಮತ್ತೊಂದು ವಿಭಜನೆಯ ಭೀತಿ ಎದುರಾಗಿದ್ದು, ಆಡಳಿತಾರೂಢ ಏಕನಾಥ್ ಶಿಂಧೆ ಬಣದ ರಾಜಕೀಯ ತಂತ್ರಗಾರಿಕೆಗೆ ಉದ್ಧವ್ ಕೋಟೆ ನಡುಗಲಾರಂಭಿಸಿದೆ.
ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ 7 ಸಂಸದರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಶೀಘ್ರದಲ್ಲೇ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.
ಭಿನ್ನಮತಕ್ಕೆ ಕಾರಣವಾಯ್ತಾ 'ಆದಿತ್ಯ'ನ ಉದಯ...?
ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಪಕ್ಷದಲ್ಲಿ ದೊಡ್ಡ ನಾಯಕತ್ವದ ಜವಾಬ್ದಾರಿ ನೀಡಲು ತಯಾರಿ ನಡೆಸಿರುವುದೇ ಈ ಇಡೀ ಬಂಡಾಯಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಜೂನ್ 19 ರಂದು ಶಿವಸೇನೆಯ 60ನೇ ಸಂಸ್ಥಾಪನಾ ದಿನಾಚರಣೆ ಇದ್ದು, ಅಂದೇ ಆದಿತ್ಯ ಠಾಕ್ರೆ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲು ಉದ್ಧವ್ ಸಜ್ಜಾಗಿದ್ದಾರೆ. ಆದರೆ, ಆದಿತ್ಯ ಠಾಕ್ರೆ ಅವರ ನಾಯಕತ್ವದಡಿ ಕೆಲಸ ಮಾಡಲು ಹಲವು ಹಿರಿಯ ಸಂಸದರು ಸಿದ್ಧರಿಲ್ಲದ ಕಾರಣ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಡಿಸಿಎಂ ಶಿಂಧೆ ಬಣದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಉದ್ಧವ್ ಠಾಕ್ರೆ ಕರೆದಿದ್ದ ತುರ್ತು ಸಭೆಗೆ ಕೇವಲ 4 ಸಂಸದರು (ಅರವಿಂದ್ ಸಾವಂತ್, ಅನಿಲ್ ದೇಸಾಯಿ, ರಾಜಾಭಾವಿ ವಾಜೆ, ಸಂಜಯ್ ಪಾಟೀಲ್) ಮಾತ್ರ ಖುದ್ದಾಗಿ ಹಾಜರಾಗಿದ್ದರು. ಉಳಿದ ಸಂಸದರಾದ ಓಂಪ್ರಕಾಶ್ ನಿಂಬಾಳ್ಕರ್, ಭಾವುಸಾಹೇಬ್ ವಾಕಚೌರೆ, ನಾಗೇಶ್ ಅಷ್ಟೀಕರ್ ಮತ್ತು ಸಂಜಯ್ ದೇಶ್‌ಮುಖ್ ಕೇವಲ ವರ್ಚುವಲ್ ಆಗಿ ಭಾಗವಹಿಸಿದ್ದರು. ಸಂಸದ ಸಂಜಯ್ ಜಾಧವ್ ಫೋನ್‌ನಲ್ಲಿ ಮಾತನಾಡಿದ್ದರು. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಸಂಜಯ್ ರಾವತ್ ಹೇಳುತ್ತಿದ್ದರೂ, ಒಳಗೊಳಗೆ 7 ಸಂಸದರು ಪಕ್ಷವನ್ನು ಇಬ್ಬಾಗ ಮಾಡಲು ರೆಡಿಯಾಗಿದ್ದಾರೆ ಎನ್ನುತ್ತವೆ ಮೂಲಗಳು.
ಹಿಸ್ಟರಿ ರಿಪೀಟ್: ಶಿವಸೇನೆಯ 4 ಬಂಡಾಯಗಳು!
ಠಾಕ್ರೆ ಕುಟುಂಬಕ್ಕೆ ಬಂಡಾಯ ಎದುರಾಗುತ್ತಿರುವುದು ಇದೇ ಮೊದಲೇನಲ್ಲ. ಶಿವಸೇನೆಯ ಇತಿಹಾಸ ತಿರುವಿ ಹಾಕಿದರೆ, ಸಿಂಹದ ಗುಹೆಯಂತಿದ್ದ ಪಕ್ಷಕ್ಕೆ ಕೊಳ್ಳಿ ಇಟ್ಟ ರೋಚಕ ಇತಿಹಾಸ ಇಲ್ಲಿದೆ.
1. ಛಗನ್ ಭುಜಬಲ್ (1991)
ಬಾಳಾಸಾಹೇಬ್ ಠಾಕ್ರೆ ಅವರ ನಿಯಂತ್ರಣದಲ್ಲಿದ್ದ ಶಿವಸೇನೆಗೆ ಬಿದ್ದ ಮೊದಲ ಬಿಗ್ ಶಾಕ್ ಎಂದರೆ ಅದು ಛಗನ್ ಭುಜಬಲ್ ಬಂಡಾಯ. 1991ರಲ್ಲಿ ಹಿರಿಯ ನಾಯಕ ಭುಜಬಲ್ ಬರೋಬ್ಬರಿ 17 ಶಾಸಕರನ್ನು ಕರೆದುಕೊಂಡು ಶಿವಸೇನೆ ಒಡೆದು ಕಾಂಗ್ರೆಸ್ ಸೇರಿದ್ದರು. ಇದು ಠಾಕ್ರೆ ಸಾಮ್ರಾಜ್ಯದ ಮೊದಲ ಆಂತರಿಕ ಬಿರುಕಾಗಿತ್ತು.
2. ನಾರಾಯಣ್ ರಾಣೆ (2005)
ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆ ಮತ್ತು ಉದ್ಧವ್ ಠಾಕ್ರೆ ನಡುವಿನ ನಾಯಕತ್ವದ ಜಗಳ ತಾರಕಕ್ಕೇರಿ, 2005ರಲ್ಲಿ ರಾಣೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದರಿಂದ, ಕೊಂಕಣ ಭಾಗದಲ್ಲಿ ಶಿವಸೇನೆ ನೆಲೆ ಕಳೆದುಕೊಳ್ಳುತ್ತಾ ಬಂತು.
3. ರಾಜ್ ಠಾಕ್ರೆ (2005) ರಕ್ತಸಂಬಂಧದ ಸವಾಲು!
ಬಾಳಾಸಾಹೇಬ್ ಠಾಕ್ರೆ ಅವರ ನಿಜವಾದ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಅವರ ಅಣ್ಣನ ಮಗ ರಾಜ್ ಠಾಕ್ರೆ, ಉದ್ಧವ್ ವಿರುದ್ಧ ಸಿಡಿದೆದ್ದು 2005ರಲ್ಲಿ ಶಿವಸೇನೆಗೆ ಗುಡ್‌ಬೈ ಹೇಳಿದರು. 2006ರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಟ್ಟಿ, ಶಿವಸೇನೆಯ ಸಾಂಪ್ರದಾಯಿಕ ಮರಾಠಿ ವೋಟ್ ಬ್ಯಾಂಕ್‌ಗೆ ನೇರ ಪೆಟ್ಟು ನೀಡಿದರು.
4. ಏಕನಾಥ್ ಶಿಂಧೆ (2022) - ಉದ್ಧವ್ ಸರ್ಕಾರವೇ ಪತನ!
ಶಿವಸೇನೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಮತ್ತು ಯಶಸ್ವಿ ಬಂಡಾಯವೆಂದರೆ ಅದು ಏಕನಾಥ್ ಶಿಂಧೆ ಅವರದ್ದು. 2019ರಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಸೇರಿ ಉದ್ಧವ್ ಠಾಕ್ರೆ ಸರ್ಕಾರ ರಚಿಸಿದ್ದನ್ನು ವಿರೋಧಿಸಿದ ಶಿಂಧೆ, ಇದು ಬಾಳಾಸಾಹೇಬರ ಹಿಂದುತ್ವಕ್ಕೆ ಮಾಡಿದ ದ್ರೋಹ ಎಂದು ಗುಡುಗಿದರು.
ಜೂನ್ 2022ರಲ್ಲಿ ಸದ್ದಿಲ್ಲದೆ ಶಾಸಕರನ್ನು ಕರೆದುಕೊಂಡು ಮೊದಲು ಗುಜರಾತ್‌ನ ಸೂರತ್, ಆಮೇಲೆ ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್‌ಗೆ ಶಿಂಧೆ ಶಿಫ್ಟ್ ಆದರು. ನೋಡನೋಡುತ್ತಿದ್ದಂತೆ 55 ಶಾಸಕರಲ್ಲಿ 39 ಶಾಸಕರು ಶಿಂಧೆ ಪಾಳಯ ಸೇರಿದರು. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವಾಗಲು 2/3ರಷ್ಟು ಬಹುಮತ ಪಡೆದ ಶಿಂಧೆ, ಸುಪ್ರೀಂ ಕೋರ್ಟ್ ಕದ ತಟ್ಟಿದರು. ಕೊನೆಗೆ ವಿಶ್ವಾಸಮತ ಯಾಚನೆಗೆ ಕೋರ್ಟ್ ಹಸಿರು ನಿಶಾನೆ ನೀಡುತ್ತಿದ್ದಂತೆ, 2022 ರ ಜೂನ್ 29 ರಂದು ಉದ್ಧವ್ ಠಾಕ್ರೆ ಫೇಸ್‌ಬುಕ್ ಲೈವ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈಗ ಅದೇ ಇತಿಹಾಸ ಮರುಕಳಿಸುವ ಭೀತಿಯಲ್ಲಿದ್ದಾರೆ ಉದ್ಧವ್ ಠಾಕ್ರೆ. ಜೂನ್ 19ರ ಸಂಸ್ಥಾಪನಾ ದಿನದಂದು ಮಹಾರಾಷ್ಟ್ರ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ(ಏಜೆನ್ಸೀಸ್).