Dharmendra Pradhan | .ರಾಹುಲ್ ಗಾಂಧಿ ವಿರುದ್ಧ ಧರ್ಮೇಂದ್ರ ಪ್ರಧಾನ್ ತೀವ್ರ ಕಿಡಿ 
ದೇಶ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೀಳು ಮಟ್ಟದ ರಾಜಕೀಯ!..ರಾಹುಲ್ ಗಾಂಧಿ ವಿರುದ್ಧ ಧರ್ಮೇಂದ್ರ ಪ್ರಧಾನ್ ಕಿಡಿ | Dharmendra Pradhan

ನವದೆಹಲಿ: ನೀಟ್ (NEET) ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ವಿದ್ಯಾರ್ಥಿಗಳ ಸಿದ್ಧತೆಯನ್ನು ಹಳಿ ತಪ್ಪಿಸಲು ಮತ್ತು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎನ್​ಡಿಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಈ ಸೂಕ್ಷ್ಮ ವಿಷಯದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳನ್ನು ಹೆದರಿಸುವ ಯತ್ನ!

ಮೇ 3 ರಂದು ನಡೆದ ಮೊದಲ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮರುಪರೀಕ್ಷೆ ನಡೆಸಲಾಗಿತ್ತು. ಈ ಮರುಪರೀಕ್ಷೆ ನಡೆದ ಎರಡು ದಿನಗಳ ಬಳಿಕ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಈ ಮರುಪರೀಕ್ಷೆಯೂ ಸಹ ವಿಫಲವಾಗಬೇಕೆಂದು ಬಯಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಪಕ್ಷಗಳಿಗೆ ಪ್ರಶ್ನೆ ಕೇಳುವ ಸಂಪೂರ್ಣ ಹಕ್ಕಿದೆ. ಆದರೆ ಪರೀಕ್ಷೆಗೆ ಕೇವಲ ಮೂರು ದಿನಗಳ ಮುನ್ನ ರಾಹುಲ್ ಗಾಂಧಿ ಕೋಟಾದಲ್ಲಿ ಕಾರ್ಯಕ್ರಮವೊಂದನ್ನು ನಡೆಸಿ ವಿದ್ಯಾರ್ಥಿಗಳನ್ನು ಹೆದರಿಸುವ ಮತ್ತು ಅವರ ಸಿದ್ಧತೆಯನ್ನು ಹಳಿ ತಪ್ಪಿಸುವ ಕೆಲಸ ಮಾಡಿದರು. ಈ ಇಡೀ ವಿದ್ಯಮಾನದಲ್ಲಿ ರಾಹುಲ್ ಅವರ ನಡೆ ನನಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರದಲ್ಲಿ ಅಸಹ್ಯಕರ ರಾಜಕೀಯ

ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರವನ್ನು ರಾಹುಲ್ ಗಾಂಧಿ ರಾಜಕೀಯಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದ ಸಚಿವರು, ದೇಶದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ನಡೆದಾಗಲೆಲ್ಲಾ ಶಿಕ್ಷಣ ಸಚಿವನಾಗಿ ನಾನು ನನ್ನನ್ನೇ ಶಪಿಸಿಕೊಳ್ಳುತ್ತೇನೆ. ಈ ಹದಗೆಟ್ಟ ವ್ಯವಸ್ಥೆಯನ್ನು ನಾವು ಸರಿಪಡಿಸಬೇಕಾಗಿದೆ. ಆದರೆ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿದ್ಯಾರ್ಥಿಗಳ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಅಸಹ್ಯಕರ ಮತ್ತು ಕೆಳಮಟ್ಟದ ರಾಜಕೀಯ ಎಂದು ಆಕ್ರೋಶ ಹೊರಹಾಕಿದ್ದಾರೆ. ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನಿಂದ ಈವರೆಗೆ ಒಂದೇ ಒಂದು ಸಕಾರಾತ್ಮಕ ಸಲಹೆ ಬಂದಿಲ್ಲ. ಅವರು ಕೇವಲ ನಿಂದನೆ ಮತ್ತು ಆರೋಪಗಳ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಸಚಿವರು ದೂರಿದ್ದಾರೆ.

ಅಬುಧಾಬಿ ಪರೀಕ್ಷಾ ಕೇಂದ್ರದ ವಿವಾದಕ್ಕೆ ಸ್ಪಷ್ಟನೆ

ವಿದ್ಯಾರ್ಥಿಯೊಬ್ಬನಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ಹಂಚಿಕೆ ಮಾಡಲಾದ ವಿವಾದದ ಕುರಿತು ಸ್ಪಷ್ಟನೆ ನೀಡಿದ ಸಚಿವರು, ಆ ವಿದ್ಯಾರ್ಥಿಯ ತಂದೆಯ ಕೋರಿಕೆಯ ಮೇರೆಗೆ ಅಲ್ಲಿ ಕೇಂದ್ರವನ್ನು ನೀಡಲಾಗಿತ್ತು ಎಂದರು. ವಿಷಯ ಗಮನಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕ್ರಮ ಕೈಗೊಂಡು ಕೇಂದ್ರವನ್ನು ನಾಗ್ಪುರಕ್ಕೆ ಬದಲಾಯಿಸಿತು. ಆದರೆ ರಾಹುಲ್ ಗಾಂಧಿ ಈ ಘಟನೆಯನ್ನೂ ರಾಜಕೀಯಗೊಳಿಸಲು ಯತ್ನಿಸಿದರು. ಕೊನೆಗೆ ಎನ್‌ಟಿಎ ನೀಡಿದ ಸತ್ಯಾಸತ್ಯತೆಯ ವರದಿ ರಾಹುಲ್ ಗಾಂಧಿ ಮುಖಭಂಗ ಅನುಭವಿಸುವಂತೆ ಮಾಡಿತು ಎಂದು ಪ್ರಧಾನ್​ ಕುಟುಕಿದ್ದಾರೆ.

ಕಾಂಗ್ರೆಸ್ ಬೇಡಿಕೆ ಮತ್ತು ಸರ್ಕಾರದ ನಿಲುವು

ಕಳೆದ ವಾರ ಕೋಟಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ರಾಹುಲ್ ಗಾಂಧಿ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಪರೀಕ್ಷಾ ವ್ಯವಸ್ಥೆಯು ದುರುಪಯೋಗಗೊಂಡಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಮತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್‌ನ ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿರುವ ಧರ್ಮೇಂದ್ರ ಪ್ರಧಾನ್, ಎಲ್ಲೆಲ್ಲಿ ಲೋಪದೋಷಗಳು ವರದಿಯಾಗಿದೆಯೋ ಅಲ್ಲೆಲ್ಲಾ ಸರ್ಕಾರ ತಕ್ಷಣದ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಆದರೆ ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿವೆ ಎಂದು ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್​​).