ಹೈದರಾಬಾದ್: ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿರೋಧಿಸುತ್ತಿರುವುದರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. "ಕಾಂಗ್ರೆಸ್ ಪಕ್ಷ ಬಾಂಗ್ಲಾದೇಶಿ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಿದೆ. ಆದರೆ, ಬಿಜೆಪಿ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನೂ ಮತದಾರರ ಪಟ್ಟಿಯಿಂದ ಕಿತ್ತೊಗೆಯುವುದು ಖಚಿತ" ಎಂದು ಗುಡುಗಿದ್ದಾರೆ.
ಹೈದರಾಬಾದ್‌ನಲ್ಲಿ ಸೋಮವಾರ (ನ.2) ನಡೆದ ಬಿಜೆಪಿಯ 'ಲೋಕತಂತ್ರ ಬಚಾವೋ' ಪಾದಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ನೇರ ದಾಳಿ ನಡೆಸಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನಾ ರ್ಯಾಲಿಯನ್ನು "ಒಳನುಸುಳುಕೋರರನ್ನು ಉಳಿಸುವ ಕಾರ್ಯಕ್ರಮ" ಎಂದು ವ್ಯಂಗ್ಯವಾಡಿದ ಶಾ, "ಕಾಂಗ್ರೆಸ್ ಕೇವಲ ಬೋಗಸ್ ವೋಟಿಂಗ್ ನಂಬಿಕೊಂಡೇ ಚುನಾವಣೆ ಗೆಲ್ಲಲು ಹೊರಟಿದೆ. ಒಬ್ಬ ವ್ಯಕ್ತಿಗೆ ಎರಡು ಮತಗಳಿದ್ದರೆ ಅದರಲ್ಲಿ ಒಂದನ್ನು ರದ್ದು ಮಾಡಬಾರದಾ?" ಎಂದು ಪ್ರಶ್ನಿಸಿದ್ದಾರೆ.
"ಈಗ ರಾಹುಲ್ ಬಾಬಾ ಅವರ ಹೊಟ್ಟೆನೋವಿಗೆ ಅಸಲಿ ಕಾರಣ ಏನು ಗೊತ್ತಾ? ದೇಶದಲ್ಲಿ ಸುಮಾರು 3 ಕೋಟಿ ನಕಲಿ ಮತಗಳು ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿವೆ. ಇವರೆಲ್ಲ ಬಾಂಗ್ಲಾದೇಶಿ ಒಳನುಸುಳುಕೋರರು. ಈ ನಕಲಿ ವೋಟ್‌ಗಳನ್ನು ತೆಗೆಯಲು ಶುರು ಮಾಡಿದ ತಕ್ಷಣ ಕಾಂಗ್ರೆಸ್‌ಗೆ ಭೀತಿ ಶುರುವಾಗಿದೆ" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ಗೆ ಸಂಸತ್ತಿನ ವೇದಿಕೆಯಲ್ಲಿ ಮುಖಾಮುಖಿಯಾಗಲು ಸವಾಲೆಸೆದ ಗೃಹ ಸಚಿವರು, "SIR ವಿಚಾರದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಆದರೆ ರಾಹುಲ್ ಗಾಂಧಿ ಸಂಸತ್ತು ಸುಗಮವಾಗಿ ನಡೆಯಲು ಬಿಡುವುದಿಲ್ಲ, ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಎದುರು ಮುಖಾಮುಖಿ ಚರ್ಚೆಯಲ್ಲಿ ಸೋತು ಸುಣ್ಣವಾಗುತ್ತೇವೆ ಎಂಬ ಭಯ ಅವರಿಗಿದೆ.
ಮನೆಯ ಮುಂದೆ ಅಣಕು ಸಂಸತ್ನನ್ನು ನಡೆಸಿದ್ದಾರೆ. ಆದರೆ, ಅಲ್ಲಿಯೂ ರಾಹುಲ್ಗಾಂಧಿ ಪ್ರಧಾನ ಮಂತ್ರಿ ಸ್ಥಾನ ಪಡೆಯಲಿಲ್ಲ. ನೈಜ ಲೋಕತಂತ್ರದಲ್ಲಂತೂ ಪ್ರಧಾನಿ ಆಗಲ್ಲ, ಕನಿಷ್ಟ ಅಣಕು ಸಂಸತ್ನಲ್ಲಾದರೂ ಪ್ರಧಾನಿ ಆಗಬೇಕಿತ್ತೆಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
"ಕಾಂಗ್ರೆಸ್ ಇಂದು ಸಂಪೂರ್ಣವಾಗಿ ವೆಂಟಿಲೇಟರ್ ಮೇಲಿರುವ ಪಕ್ಷ. ಇಂತಹ ಪರಿಸ್ಥಿತಿಯಲ್ಲಿರುವ ಪಕ್ಷ ಪ್ರಧಾನಿ ಮೋದಿಯವರ ಜೊತೆ ರಾಜಕೀಯ ಮ್ಯಾರಥಾನ್‌ನಲ್ಲಿ ಸ್ಪರ್ಧಿಸಲು ಸಾಧ್ಯವೇ? ರಾಹುಲ್ ಗಾಂಧಿ ನಮ್ಮ ತೆಲಂಗಾಣ ಯುವ ಮೋರ್ಚಾ ಅಧ್ಯಕ್ಷರ ಎದುರು ಸ್ಪರ್ಧಿಸಿದರೂ ಸೋತು ಹೋಗುತ್ತಾರೆ" ಎಂದು ಅಪಹಾಸ್ಯ ಮಾಡಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳ (EVM) ಮೇಲಿನ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ ಶಾ, "ರಾಹುಲ್ ಜೀ, ಒಂದು ವೇಳೆ EVM ದೋಷಪೂರಿತವಾಗಿದ್ದರೆ ನಿಮ್ಮ ರೇವಂತ್ ರೆಡ್ಡಿ ತೆಲಂಗಾಣದ ಮುಖ್ಯಮಂತ್ರಿ ಆಗಿದ್ದು ಹೇಗೆ? ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ ಅಥವಾ ತಮಿಳುನಾಡಿನಲ್ಲಿ ನಿಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು ಹೇಗೆ? EVM ಅಷ್ಟು ಕೆಟ್ಟದ್ದಾಗಿದ್ದರೆ ನಿಮ್ಮ ನಾಯಕರು ಅಧಿಕಾರ ಸ್ವೀಕರಿಸುವಾಗ ಪ್ರಮಾಣವಚನವನ್ನೇ ತೆಗೆದುಕೊಳ್ಳಬಾರದಿತ್ತು. ನೀವು ಗೆದ್ದಾಗ ಅದು ಜನರ ತೀರ್ಪು, ಸೋತಾಗ ಮಾತ್ರ ಇವಿಎಂ ದೋಷವೇ? 10 ವರ್ಷ ದೇಶವನ್ನಾಳಿ 12 ಲಕ್ಷ ಕೋಟಿ ಹಗರಣ ನಡೆಸಿದವರು ನೀವು" ಎಂದು ಚಾಟಿ ಬೀಸಿದ್ದಾರೆ, (ಏಜೆನ್ಸೀಸ್).