ದಳಪತಿ ವಿಜಯ್ ತ್ಯಜಿಸಿದ ತಿರುಚ್ಚಿ ಪೂರ್ವ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸುವ ವದಂತಿ
- ತಮಿಳುನಾಡು ರಾಜಕೀಯದಲ್ಲಿ ಸಂಚಲನ!
- ದಳಪತಿ ವಿಜಯ್ ತ್ಯಜಿಸಿದ ತಿರುಚ್ಚಿ ಪೂರ್ವ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸುವ ವದಂತಿ
- ಜೂನ್ 11 ಕ್ಕೆ ಪತ್ರಿಕಾಗೋಷ್ಟಿ ಕರೆದಿರುವ ನಟ-ನಿರ್ದೇಶಕ
ತಮಿಳುನಾಡು: ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಬಹುಮತವನ್ನು ಸಾಬೀತುಪಡಿಸಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ.
ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ, ಜೋಸೆಫ್ ವಿಜಯ್, ಪೆರಂಬೂರು ಹಾಗೂ ತಿರುಚ್ಚಿ ಪೂರ್ವ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದುಬಂದಿದ್ದರು. ಆದರೆ ಪೆರಂಬೂರನ್ನು ಉಳಿಸಿಕೊಂಡ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರವನ್ನು ತ್ಯಜಿಸಿದ್ದರು.
ಈಗ ಈ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ತಮಿಳು ಚಿತ್ರರಂಗದ ಇನ್ನೋರ್ವ ಸೂಪರ್ ಸ್ಟಾರ್ ನಟ-ನಿರ್ದೇಶಕ ರಾಘವ್ ಲಾರೆನ್ಸ್ (Raghava Lawrence) ಚುನಾವಣಾ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವದಂತಿ ಹಬ್ಬಿದೆ.
ರಾಘವ್ ಲಾರೆನ್ಸ್ ಹೇಳಿದ್ದೇನು?
ತಿರುಚ್ಚಿ ಪೂರ್ವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ರಾಘವ್ ಲಾರೆನ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ನನಗೆ ನೂರಾರು ಫೋನ್ ಕರೆಗಳು, ಮೆಸೇಜ್ಗಳು ಬರುತ್ತಿದೆ. ನಾನು ಯಾವಾಗ ರಾಜಕೀಯಕ್ಕೆ ಬರುತ್ತೇನೆ, ತಿರುಚ್ಚಿ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ನಿಜವೇ? ಎಂದೆಲ್ಲಾ ಕೇಳುತ್ತಿದ್ದಾರೆ.
ಆದರೆ ನಾನು ಸದ್ಯ, ಬೆಂಜ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದೇನೆ, ಶೂಟಿಂಗ್ ಜೂನ್ 10 ಕ್ಕೆ ಮುಗಿಯುತ್ತಿದ್ದು, ಜೂನ್ 11 ಕ್ಕೆ ನಾನು ಪತ್ರಿಕಾಗೋಷ್ಟಿ ಕರೆದಿದ್ದೆನೆ. ಅಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಲಿದ್ದೇನೆಂದು ನಟ-ನಿರ್ದೇಶಕ ರಾಘವ್ ಲಾರೆನ್ಸ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಯಾರು ಈ ರಾಘವ್ ಲಾರೆನ್ಸ್?
ರಾಘವ ಲಾರೆನ್ಸ್ ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ, ನಿರ್ದೇಶಕ, ನೃತ್ಯ ಸಂಯೋಜಕ ಮತ್ತು ನಿರ್ಮಾಪಕರಾಗಿದ್ದಾರೆ. ಇವರು ಮುಖ್ಯವಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಇವರ ಮೂಲ ಹೆಸರು ಲಾರೆನ್ಸ್ ರಾಘವೇಂದ್ರ.
ಬಾಲ್ಯದಲ್ಲಿ ಬ್ರೈನ್ ಟ್ಯುಮರ್ ಕಾಯಿಲೆಯಿಂದ ಬಳಲುತ್ತಿದ್ದ ಇವರು, ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು, ಅವರ ಕೃಪೆಯಿಂದಲೇ ತಮಗೆ ಗುಣವಾಯಿತು ಎಂದು ನಂಬಿದ್ದಾರೆ. ಇದೇ ಕಾರಣಕ್ಕಾಗಿ ಅವರು ತಮ್ಮ ಹೆಸರಿನ ಮುಂದೆ ರಾಘವ ಎಂದು ಸೇರಿಸಿಕೊಂಡಿದ್ದಾರೆ.
ನಿರ್ದೇಶನ ಮತ್ತು ಕಾಂಚನಾ ಸರಣಿಯ ಸಕ್ಸಸ್
ರಾಘವ ಲಾರೆನ್ಸ್ ಕೇವಲ ನಟನೆಯಷ್ಟೇ ಅಲ್ಲದೆ ಸಕ್ಸಸ್‌ಫುಲ್ ನಿರ್ದೇಶಕರೂ ಹೌದು. ನಾಗಾರ್ಜುನ ನಟನೆಯ ತೆಲುಗಿನ ಮಾಸ್ ಮತ್ತು ಡಾನ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಇವರು ಮೆಗಾ ಹಿಟ್ ನಿರ್ದೇಶಕರಾದರು.
ಆದರೆ ಇವರ ಚಿತ್ರಜೀವನಕ್ಕೆ ದೊಡ್ಡ ತಿರುವು ನೀಡಿದ್ದು ಹಾರರ್ ಕಾಮಿಡಿ ಶೈಲಿಯ ಸಿನಿಮಾಗಳು. ಇವರು ನಿರ್ದೇಶಿಸಿ, ನಟಿಸಿದ ಮುನಿ, ಕಾಂಚನಾ, ಕಾಂಚನಾ-2 ಮತ್ತು ಕಾಂಚನಾ-3 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದವು. ಈ ಸಿನಿಮಾಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್ ಆಗಿವೆ.
ಮಾನವೀಯತೆ ಮತ್ತು ಸಮಾಜ ಸೇವೆ
ರಾಘವ ಲಾರೆನ್ಸ್ ಕೇವಲ ಒಬ್ಬ ಕಲಾವಿದನಾಗಿ ಮಾತ್ರವಲ್ಲದೆ ತಮ್ಮ ಉದಾರ ಹೃದಯದ ಸಮಾಜ ಸೇವೆಯಿಂದಾಗಿ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ರಾಘವ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಇವರು ನೂರಾರು ಬಡ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಕೊಡಿಸಿದ್ದಾರೆ ಮತ್ತು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿಯನ್ನು ಒದಗಿಸುತ್ತಿದ್ದಾರೆ.
ಸಿನಿಮಾ ಗಳಿಕೆಯ ಬಹುಪಾಲು ಹಣವನ್ನು ಸಮಾಜ ಸೇವೆಗೆ ಬಳಸುವ ಇವರು, ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿಯೂ ವಿಶೇಷ ಆಶ್ರಮ ಮತ್ತು ಸಹಾಯ ಹಸ್ತ ಚಾಚಿದ್ದಾರೆ. ಇವರ ಈ ಅದ್ಭುತ ಮಾನವೀಯ ಗುಣದಿಂದಾಗಿ ಇವರನ್ನು ರಿಯಲ್ ಹೀರೋ ಎಂದು ಕರೆಯಲಾಗುತ್ತದೆ, (ಏಜನ್ಸೀಸ್).