Raghav Chadha | ರಾಷ್ಟ್ರಪತಿ ಮುರ್ಮು ಭೇಟಿಯಾಗಿ ರಕ್ಷಣೆ ಕೋರಿದ ರಾಘವ್ ಚಡ್ಡಾ ನಿಯೋಗ!  
ದೇಶ

ಆಪ್​​ ತೊರೆದಿದ್ದಕ್ಕೆ ಸೇಡಿನ ರಾಜಕಾರಣ!...ರಾಷ್ಟ್ರಪತಿ ಮುರ್ಮು ಭೇಟಿಯಾಗಿ ರಕ್ಷಣೆ ಕೋರಿದ ರಾಘವ್ ಚಡ್ಡಾ ನಿಯೋಗ! | Raghav Chadha

ದೆಹಲಿ: ಇತ್ತೀಚೆಗೆ ಆಮ್​ ಆದ್ಮಿ ಪಕ್ಷದಿಂದ ಹೊರಬಂದಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ನೇತೃತ್ವದ ನಿಯೋಗ, ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಪಂಜಾಬ್‌ನ ಆಪ್​ ಸರ್ಕಾರವು ಸರ್ಕಾರಿ ಯಂತ್ರೋಪಕರಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ಕುರಿತಾಗಿ ಪೋಸ್ಟ್​​ವೊಂದನ್ನು ಹಂಚಿಕೊಂಡಿರುವ ಚಡ್ಡಾ, ಎಎಪಿಯ ಮೂರನೇ ಎರಡರಷ್ಟು ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದು, ಈ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರಪತಿಗಳಿಗೆ ತಿಳಿಸಿದರು. ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು ಮತ್ತು ರಾಜಕೀಯ ಸೇಡು ತೀರಿಸಿಕೊಳ್ಳಲು ಪಂಜಾಬ್ ಆಡಳಿತವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರಪತಿಗಳನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಡ್ಡಾ, ಎಎಪಿ ತೊರೆದ ಸಂಸದರ ವಿರುದ್ಧ ಪಂಜಾಬ್ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ. ವಿಶ್ವಕಪ್ ವಿಜೇತ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ನಿವಾಸದ ಹೊರಗೆ ಆಪ್​ ಕಾರ್ಯಕರ್ತರು ಪಂಜಾಬ್ ಪೊಲೀಸರ ಸಹಾಯದಿಂದ ಗದ್ದಾರ್ (ದೇಶದ್ರೋಹಿ) ಎಂದು ಬರೆದು ವಿರೂಪಗೊಳಿಸಿದ್ದಾರೆ. ಅಲ್ಲದೆ, ಪದ್ಮಶ್ರೀ ರಾಜೇಂದ್ರ ಗುಪ್ತಾರ ಕಾರ್ಖಾನೆಗೆ ನೀಡಲಾಗಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸಂದೀಪ್ ಪಾಠಕ್ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಿ, ಅವರನ್ನು ಬಂಧಿಸಲಾಗುವುದು ಎಂಬ ಸುದ್ದಿಯನ್ನು ಹರಡಲಾಗುತ್ತಿದೆ ಎಂದು ವಿವರಿಸಿದರು.
ಮುಂದುವರಿದು ಮಾತನಾಡಿದ ಚಡ್ಡಾ, ವಿಜಿಲೆನ್ಸ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೂಲಕ ಎಎಪಿ ಸೇಡಿನ ಆಟವನ್ನು ಶುರು ಮಾಡಿದೆ. ಮೂಲಗಳ ಪ್ರಕಾರ, ಅವರ ಮುಂದಿನ ಗುರಿ ನಾನೇ ಆಗಿದ್ದೇನೆ. ನಮಗೆ ಬೆದರಿಕೆ ಹಾಕಲು ಪಂಜಾಬ್ ಸರ್ಕಾರದ ಹಣವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಏಜೆನ್ಸಿಗಳನ್ನು ನೇಮಿಸಲಾಗಿದೆ. ಎಎಪಿ ಈಗ ಭ್ರಷ್ಟ ಮತ್ತು ಸ್ವಾರ್ಥಿ ಜನರ ಕೈಯಲ್ಲಿ ಸಿಲುಕಿಕೊಂಡಿದೆ ಎಂದು ಕಿಡಿ ಕಾರಿದರು.
ಕೆಲವೇ ದಿನಗಳ ಹಿಂದೆ ರಾಘವ್ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಸೇರಿದಂತೆ ಏಳು ಸಂಸದರು ಎಎಪಿ ತೊರೆದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಎಎಪಿಯ ಮೂರನೇ ಎರಡರಷ್ಟು ರಾಜ್ಯಸಭಾ ಸದಸ್ಯರು ಸಂಘಟನೆಯಿಂದ ದೂರ ಸರಿದಿದ್ದು, ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಚಡ್ಡಾ ತಿಳಿಸಿದ್ದರು(ಏಜೆನ್ಸೀಸ್​​).