ನವದೆಹಲಿ: ಕಾಂಗ್ರೆಸ್ ಪಕ್ಷದ ಮೇಲೆ ಗಾಂಧಿ ಕುಟುಂಬದ ನಿರಂತರ ನಿಯಂತ್ರಣ ಮತ್ತು ಸ್ವಜನಪಕ್ಷಪಾತದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇರವಾಗಿ ಉತ್ತರಿಸದೇ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕತ್ವದ ಕುರಿತಾದ ಪ್ರಶ್ನೆಗೆ ಪಕ್ಷವನ್ನೇ ಕೇಳಬೇಕು ಎಂದು ಹೇಳಿದ್ದಾರೆ.
ತಮ್ಮ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆಯ ಭಾಗವಾಗಿ ಬ್ರಿಟಿಷ್ ಪತ್ರಿಕೆ 'ದಿ ಗಾರ್ಡಿಯನ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೋನಿಯಾ ಗಾಂಧಿಯವರು, ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬದ ನಾಯಕತ್ವವನ್ನೇ ಯಾಕೆ ಮುಂದುವರಿಸಿದೆ ಎಂದು ಸಂದರ್ಶಕರು ಕೇಳಿದಾಗ, ನೀವು ಈ ಬಗ್ಗೆ ಪಕ್ಷವನ್ನೇ ಕೇಳಬೇಕು ಎಂದು ಉತ್ತರಿಸಿದ್ದಾರೆ.
ಮುಂದುವರೆದು, ಸ್ವಜನಪಕ್ಷಪಾತದ ಆರೋಪಕ್ಕೂ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ನಾವೆಲ್ಲರೂ ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ. ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ. ನಾವೆಲ್ಲರೂ ಹಾಗೆಯೇ ರಾಜಕಾರಣ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ದಿ ಹಿಂದೂ ಪತ್ರಿಕೆ ನೀಡಿದ ಸಂದರ್ಶನದಲ್ಲಿ, ಕಳೆದ 12 ವರ್ಷಗಳ ಬಿಜೆಪಿ ಆಡಳಿತದಲ್ಲಿ ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ, ಪ್ರಜಾಪ್ರಭುತ್ವ ಮತ್ತು ದೇಶದ ಪ್ರಮುಖ ಸಂಸ್ಥೆಗಳಿಗೆ ಅಪಾರ ಹಾನಿಯಾಗಿದೆ. ಈ ಸರ್ಕಾರ ತೊಲಗಿದ ನಂತರವೂ ನಮ್ಮ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತೆ ಹಳಗೆ ತರಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳಿಂದ ಅಪಾರ ಶ್ರಮದ ಅಗತ್ಯವಿದ್ದು, ಕಾಲಕ್ರಮೇಣ ಭಾರತೀಯ ವ್ಯವಸ್ಥೆಯು ಮತ್ತೆ ಸರಿಯಾದ ಆಡಳಿತಕ್ಕೆ ಮರಳುತ್ತದೆ ಎಂಬ ಭರವಸೆ ತಮಗಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).