ಎರಡು ಲಾರಿಗಳು ಸಾಗುತ್ತಿದ್ದಾಗಲೇ ಮುರಿದು ಬಿದ್ದ ಕಬ್ಬಿಣದ ಸೇತುವೆ WEB
ದೇಶ

ಎರಡು ಲಾರಿಗಳು ಸಾಗುತ್ತಿದ್ದಾಗಲೇ ಮುರಿದು ಬಿದ್ದ ಕಬ್ಬಿಣದ ಸೇತುವೆ; ಹೊತ್ತಿ ಉರಿದ ಟ್ರಕ್ |BridgeCollapse

ಎರಡು ಲಾರಿಗಳು ಸಂಚರಿಸುತ್ತಿದ್ದ ವೇಳೆಯೇ ಕಬ್ಬಿಣದ ಸೇತುವೆಯೊಂದು ಏಕಾಏಕಿ ಕುಸಿದುಬಿದ್ದ ಘಟನೆ ಪಂಜಾಬ್‌ನ ಪಟಿಯಾಲಾ–ಸಂಗ್ರೂರ್ ಬೈಪಾಸ್‌ನ ಭಕ್ರಾ ಕಾಲುವೆ ಬಳಿ ಗುರುವಾರ ಮುಂಜಾನೆ ನಡೆದಿದೆ. ಸೇತುವೆ ಕುಸಿದ ಪರಿಣಾಮ ಎರಡು ಲಾರಿಗಳು ಅದರ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದು, ಘಟನೆಯ ಬೆನ್ನಲ್ಲೇ ಒಂದು ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. BridgeCollapse

ಪಂಜಾಬ್: ಎರಡು ಲಾರಿಗಳು ಸಂಚರಿಸುತ್ತಿದ್ದ ವೇಳೆಯೇ ಕಬ್ಬಿಣದ ಸೇತುವೆಯೊಂದು ಏಕಾಏಕಿ ಕುಸಿದುಬಿದ್ದ ಘಟನೆ ಪಂಜಾಬ್‌ನ ಪಟಿಯಾಲಾ–ಸಂಗ್ರೂರ್ ಬೈಪಾಸ್‌ನ ಭಕ್ರಾ ಕಾಲುವೆ ಬಳಿ ಗುರುವಾರ ಮುಂಜಾನೆ ನಡೆದಿದೆ. ಸೇತುವೆ ಕುಸಿದ ಪರಿಣಾಮ ಎರಡು ಲಾರಿಗಳು ಅದರ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದು, ಘಟನೆಯ ಬೆನ್ನಲ್ಲೇ ಒಂದು ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪಟಿಯಾಲಾ ಸಂಗ್ರೂರ್ ಬೈಪಾಸ್‌ನ ಪಸಿಯಾನಾ ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಎರಡು ಲಾರಿಗಳು ಸೇತುವೆಯ ಮೇಲೆ ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸೇತುವೆಯ ಒಂದು ಭಾಗ ಕುಸಿದಿದೆ. ಪರಿಣಾಮ ಲಾರಿಗಳು ಕುಸಿದ ಸೇತುವೆಯ ಭಾಗದೊಳಗೆ ಸಿಲುಕಿಕೊಂಡಿವೆ. ಈ ವೇಳೆ ಒಂದು ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಬೆಂಕಿ ನಂದಿಸಲು ಹರಸಾಹಸ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸಾಕಷ್ಟು ಪ್ರಯತ್ನದ ಬಳಿಕ ಲಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸೇತುವೆ ಕುಸಿದ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಹಾಗೂ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

ಸೇತುವೆ ಅಲುಗಾಡುತ್ತಿದ್ದರೂ ಗಮನಹರಿಸಿರಲಿಲ್ಲವೇ?

ಘಟನೆಯ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಲಾರಿ ಚಾಲಕ ರಾಜ್‌ವೀರ್, ಆ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ. ನಾನು ಮಾನ್ಸಾ ಕಡೆಗೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದೆ. ಏಕಾಏಕಿ ಸೇತುವೆ ಹೇಗೆ ಕುಸಿಯಿತು ಎಂಬುದೇ ತಿಳಿಯಲಿಲ್ಲ. ನೋಡನೋಡುತ್ತಿದ್ದಂತೆಯೇ ಎರಡೂ ಲಾರಿಗಳು ಕುಸಿದ ಸೇತುವೆಯ ಅವಶೇಷಗಳ ನಡುವೆ ಬಿದ್ದವು. ದುರಂತದಲ್ಲಿ ಒಂದು ಲಾರಿ ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮತ್ತೊಂದು ವಾಹನವೂ ಜಖಂಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ಒಬ್ಬರನ್ನು ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಉಳಿದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಘಟನೆಯ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

ಇದೇ ವೇಳೆ ಸೇತುವೆ ಸಂಚರಿಸುವಾಗ ಸ್ವಲ್ಪ ಅಲುಗಾಡುತ್ತಿತ್ತು. ಅದನ್ನು ಮೊದಲೇ ಗಮನಿಸಿ ಸಂಚಾರ ತಡೆದಿದ್ದರೆ ಬಹುಶಃ ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ಚಾಲಕ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಪಂಜಾಬ್ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: 42 ಘಟಾನುಘಟಿ ನಾಯಕರ ‘ಪ್ರದೇಶ ಚುನಾವಣಾ ಸಮಿತಿ’ ರಚಿಸಿದ ಕೈಪಡೆ! Punjab Elections

ಸೇತುವೆ ಕುಸಿತಕ್ಕೆ ಕಾರಣವೇನು?

ಸದ್ಯ ಸೇತುವೆ ಕುಸಿಯಲು ನಿಖರವಾದ ಕಾರಣ ತಿಳಿದುಬಂದಿಲ್ಲ. ಸೇತುವೆಯ ಸ್ಥಿತಿಗತಿ, ಅದರ ನಿರ್ವಹಣೆ ಹಾಗೂ ಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ಪರಿಶೀಲನೆ ನಡೆಯಬೇಕಿದೆ. ಈ ಘಟನೆ ಹಿನ್ನೆಲೆಯಲ್ಲಿ ಪಟಿಯಾಲಾ–ಸಂಗ್ರೂರ್ ಬೈಪಾಸ್‌ನಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪರಿಸ್ಥಿತಿ ಎದುರಾಗಬಹುದು.