ನವದೆಹಲಿ: ಇತ್ತೀಚೆಗೆ ಆಪ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್(Sandeep Pathak) ವಿರುದ್ಧ ಪಂಜಾಬ್ನ ಆಪ್ ಸರ್ಕಾರ ಎರಡು ಎಫ್ಐಆರ್ ದಾಖಲಿಸಿದೆ ಎನ್ನಲಾಗಿದ್ದು, ಅವರ ಬಂಧನಕ್ಕೆ ಪಂಜಾಬ್ ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಭಾನುವಾರ(ಮೇ 03) ವರದಿಯಾಗಿದೆ.
ಸಂದೀಪ್ ಪಾಠಕ್ ವಿರುದ್ಧ ಭ್ರಷ್ಟಾಚಾರ ಮತ್ತು ಕಿರುಕುಳ ಸೇರಿದಂತೆ ಜಾಮೀನು ರಹಿತ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಂಧಿಸಲು ಶನಿವಾರ ಪಂಜಾಬ್ ಪೊಲೀಸರು ದೆಹಲಿಯ ಅವರ ನಿವಾಸಕ್ಕೆ ತೆರಳಿದ್ದಾಗ, ಪಾಠಕ್ ಮನೆಯ ಹಿಂಬಾಗಿಲ ಮೂಲಕ ಬಂಧನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಅಜ್ಞಾತವಾಸಕ್ಕೆ ತೆರಳಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಇಂದು ಪ್ರತ್ಯಕ್ಷವಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಕುರಿತು ಪ್ರತಿಕ್ರಿಯೆ ನೀಡಿರುವ ಸಂದೀಪ್ ಪಾಠಕ್, ನಿನ್ನೆಯಿಂದ ಪಂಜಾಬ್‌ನಲ್ಲಿ ನನ್ನ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡುತ್ತಿವೆ. ಈ ಎಫ್‌ಐಆರ್‌ಗಳ ಬಗ್ಗೆ ನನಗೆ ಇನ್ನೂ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಮಾಹಿತಿ ಬಂದಿಲ್ಲ. ನಿನ್ನೆಯಿಂದ ನಾನು ಪ್ರತಿಕ್ರಿಯಿಸಲು ಎಫ್‌ಐಆರ್‌ಗಳ ಪ್ರತಿಯನ್ನು ಸ್ವೀಕರಿಸಲು ಕಾಯುತ್ತಿದ್ದೇನೆ. ಈ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಸರ್ಕಾರಿ ಯಂತ್ರ ದುರುಪಯೋಗಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರೆ, ನೋಡಿಕೊಂಡು ಮಾತನಾಡ್ತೇನೆ ಎಂದಿದ್ದಾರೆ.
ನನ್ನನ್ನು ತಿಳಿದಿರುವ ಪ್ರತಿಯೊಬ್ಬರಿಗೂ ನಾನು ತತ್ವಗಳು ಮತ್ತು ನೀತಿಯನ್ನು ಅನುಸರಿಸುವ ವ್ಯಕ್ತಿ ಎಂದು ಚೆನ್ನಾಗಿ ತಿಳಿದಿದೆ. ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡುವವರೆಗೂ, ತತ್ವಗಳು ಮತ್ತು ನೀತಿಯ ಪ್ರಕಾರ ಕೆಲಸ ಮಾಡಿದ್ದೇನೆ. ಇಂದು ಭಾರತೀಯ ಜನತಾ ಪಕ್ಷದಲ್ಲಿದ್ದೇನೆ. ಅದೇ ಪ್ರಕಾರ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ರಾಜಕೀಯದಲ್ಲಿ ಯಶಸ್ಸು ಅಥವಾ ವೈಫಲ್ಯ ನನಗೆ ಮುಖ್ಯವಲ್ಲ ಎಂದು ತಿಳಿಸಿದ್ದಾರೆ.
2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಪಾಠಕ್, ಏಪ್ರಿಲ್ 2026ರ ಅಂತ್ಯದಲ್ಲಿ ಇತರ ಆರು ಸಂಸದರೊಂದಿಗೆ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ (ಏಜೆನ್ಸೀಸ್).