ದಳಪತಿ ವಿಜಯ್ 
ದೇಶ

ಪುದುಚೇರಿ ಚುನಾವಣೆ: ನಟ ದಳಪತಿ ವಿಜಯ್ ಅವರ ಟಿವಿಕೆ ಏಕಾಂಗಿಯಾಗಿ ಸ್ಪರ್ಧೆ; 30 ಅಭ್ಯರ್ಥಿಗಳ ಪಟ್ಟಿ ರಿಲೀಸ್ | Puducherry elections

ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ(Puducherry elections) ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಭಾನುವಾರ(ಮಾ. 23) 30 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಏಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ. 30 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಪ್ರಸ್ತುತ ವಿಧಾನಸಭೆಯ ಅವಧಿ ಜೂನ್ 15ರಂದು ಮುಕ್ತಾಯಗೊಳ್ಳಲಿದೆ.
ಪಿಟಿಐ ವರದಿ ಪ್ರಕಾರ, ಟಿವಿಕೆಯ 30 ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಿದೆ. ಮಂಗಳಂ ಮತ್ತು ಕದಿರ್ಕಾಮಮ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಇತರೆ ಪಕ್ಷಗಳಿಂದ ಪಕ್ಷಾಂತರಗೊಂಡವರು ಪಟ್ಟಿಯಲ್ಲಿದ್ದಾರೆ. ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಎಕೆ ಸಾಯಿ ಜೆ ಸರವಣನ್ ಕುಮಾರ್ ಅವರಿಗೆ ತಿರುಭುವನೈ ಮೀಸಲು ಕ್ಷೇತ್ರದಿಂದ ಅವಕಾಶ ನೀಡಲಾಗಿದೆ.
ಹಾಗೆಯೇ ಎಐಎಡಿಎಂಕೆಯ ಮಾಜಿ ಶಾಸಕರಾದ ಕೆಎಯು ಆಸನ ಮತ್ತು ಎಲ್ ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಮತ್ತು ನೆಟ್ಟಪಕ್ಕಂ (ಮೀಸಲು) ಕ್ಷೇತ್ರದಿಂದ ನೀಡಲಾಗಿದೆ. ಇದಲ್ಲದೆ, ಪುದುಚೇರಿಯ ಮಾಜಿ ಬಿಜೆಪಿ ಅಧ್ಯಕ್ಷ ವಿ ಸಾಮಿನಾಥನ್ ಅವರನ್ನು ಲಾಸ್ಪೆಟ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಮಾಜಿ ಪೊಲೀಸ್ ಉಪ ಮಹಾನಿರ್ದೇಶಕ ವಿಜೆ ಚಂದ್ರನ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಶಾಸಕ ಎನ್ ಧನವೇಲೌ ಅವರು ಸ್ಪರ್ಧಿಸಿದ್ದಾರೆ.
2021ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ 10 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಿತ್ತು. ಡಿಎಂಕೆ 6 ಸ್ಥಾನ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6 ಸ್ಥಾನಗಳನ್ನು ಗೆಲುವು ಸಾಧಿಸಿದ್ದವು. (ಏಜೆನ್ಸೀಸ್).