West Bengal Election | ಫಲಿತಾಂಶಕ್ಕೂ ಮುನ್ನವೇ ಬಂಗಾಳದಲ್ಲಿ ಉದ್ವಿಗ್ನತೆ!
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Election)
ಮತ ಎಣಿಕೆಗೆ ಕೆಲವೇ ದಿನಗಳು ಬಾಕಿ ಇರುವಂತೆ ದಕ್ಷಿಣ 24 ಪರಗಣ ಜಿಲ್ಲೆಯಾದ್ಯಂತ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಶನಿವಾರ ಮರು ಮತದಾನ, ಭಾರಿ ಪ್ರತಿಭಟನೆ ಮತ್ತು ರಾಜಕೀಯ ತಂತ್ರಗಾರಿಕೆಗಳಿಗೆ ರಾಜ್ಯ ಸಾಕ್ಷಿಯಾಯಿತು. ಹೆಚ್ಚಿನ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದರೂ, ಕಿರುಕುಳ ಮತ್ತು ಬೆದರಿಕೆ ಆರೋಪಗಳು ಪರಿಸ್ಥಿತಿಯನ್ನು ಕಾವೇರಿಸಿವೆ.
ಅಪರೂಪದ ಮತ್ತು ಕಠಿಣ ಕ್ರಮವೊಂದರಲ್ಲಿ, ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲುಗೊಳಿಸಲಾಗಿದೆ ಎಂಬ ಗಂಭೀರ ಆರೋಪದ ಮೇಲೆ, ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಹೊಸದಾಗಿ ಮತದಾನ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ. ಈ ಮರು ಮತದಾನವು ಮೇ 21 ರಂದು ನಡೆಯಲಿದ್ದು, ಮೇ 24 ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೆ, ಉಳಿದ 293 ಸ್ಥಾನಗಳ ಫಲಿತಾಂಶವು ಪೂರ್ವನಿರ್ಧರಿತ ವೇಳಾಪಟ್ಟಿಯಂತೆ ಮೇ 4 ರಂದೇ ಪ್ರಕಟವಾಗಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮರು ಮತದಾನದಲ್ಲಿ ದಾಖಲೆ ಶೇ. 90ರಷ್ಟು ವೋಟಿಂಗ್
ಶನಿವಾರ ಮಗ್ರಹತ್ ಪಶ್ಚಿಮ್‌ನ 11 ಮತ್ತು ಡೈಮಂಡ್ ಹಾರ್ಬರ್‌ನ 4 ಮತಗಟ್ಟೆಗಳು ಸೇರಿದಂತೆ ಒಟ್ಟು 15 ಕೇಂದ್ರಗಳಲ್ಲಿ ಸಂಜೆ 6 ಗಂಟೆಗೆ ಮರು ಮತದಾನ ಮುಕ್ತಾಯಗೊಂಡಿದೆ. ಈ ಕೇಂದ್ರಗಳಲ್ಲಿ ದಾಖಲೆಯ ಶೇ. 90 ರಷ್ಟು ಮತದಾನವಾಗಿದ್ದು, ಸಂಜೆ 5 ಗಂಟೆಯವರೆಗೆ ಶೇ. 86.90 ರಷ್ಟು ಮತದಾನ ದಾಖಲಾಗಿತ್ತು. ಡೈಮಂಡ್ ಹಾರ್ಬರ್‌ನ ಚಂದಾ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 179 ರಲ್ಲಿ ವಿಶೇಷ ಚೇತನ ಮತದಾರ ಮತ್ತು ಆತನ ತಾಯಿಗೆ ಕೇಂದ್ರ ಪಡೆಗಳು ಕಿರುಕುಳ ನೀಡಿವೆ ಎಂದು ತೃಣಮೂಲ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ಬೆಂಕಿ ಹಚ್ಚುವ ಬೆದರಿಕೆ; ಬೀದಿಗಿಳಿದ ಮಹಿಳೆಯರು
ಫಾಲ್ಟಾದ ಹಾಸಿಮ್‌ನಗರ ಗ್ರಾಮದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೇ 4 ರ ಫಲಿತಾಂಶದ ಬಳಿಕ ಟಿಎಂಸಿ ಅಭ್ಯರ್ಥಿ ಜೆಹಾಂಗೀರ್ ಖಾನ್ ಆಪ್ತ ಇಸ್ರಾಫಿಲ್ ಎಂಬಾತ ಮನೆಗಳಿಗೆ ಬೆಂಕಿ ಹಚ್ಚುವುದಾಗಿ ಮತ್ತು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ನೂರಾರು ಮಹಿಳೆಯರು ಬಿಜೆಪಿ ಧ್ವಜ ಹಿಡಿದು ಏಳು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಸಿಆರ್‌ಪಿಎಫ್ ಉಪ ಕಮಾಂಡೆಂಟ್ ನೇತೃತ್ವದಲ್ಲಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಪಥಸಂಚಲನ ನಡೆಸಿ ಭದ್ರತೆಯ ಭರವಸೆ ನೀಡಲಾಯಿತು.
ದೀದಿ ರಣತಂತ್ರ ಮತ್ತು ವಿಶ್ವಾಸ
ಇತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಂಸದ ಅಭಿಷೇಕ್ ಬ್ಯಾನರ್ಜಿಯೊಂದಿಗೆ ಎಣಿಕೆ ಏಜೆಂಟ್‌ಗಳ ಸಭೆ ನಡೆಸಿ, ಟಿಎಂಸಿ 294 ಸ್ಥಾನಗಳಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಕ್ಸಿಟ್ ಪೋಲ್‌ಗಳು ಕೇವಲ ಪ್ರಚಾರ ಎಂದು ತಳ್ಳಿಹಾಕಿದ ದೀದಿ, ಕೇಂದ್ರ ಪಡೆಗಳಿಂದ ಹಲ್ಲೆಗೊಳಗಾದ ಕಾರ್ಯಕರ್ತರಿಗೆ ಆರ್ಥಿಕ ಪರಿಹಾರ ಘೋಷಿಸಿದರು. ಇದೇ ವೇಳೆ ಕೋಲ್ಕತ್ತಾದ ಸ್ಟ್ರಾಂಗ್ ರೂಮ್‌ಗಳಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದರೂ, ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ಅಕ್ರಮದ ಸಾಧ್ಯತೆಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ನಾಳೆ (ಮೇ.4) ಹೊರಬೀಳಲಿದೆ(ಏಜೆನ್ಸೀಸ್).