ನವದೆಹಲಿ: ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಇಂಡಿಯಾ ಎಐ ಶೃಂಗಸಭೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಅರೆಬೆತ್ತಲೆಯಾಗಿ ಪ್ರತಿಭಟಿಸಿದ ಬಗ್ಗೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಈಗಾಗಲೇ ನೀವು ದೇಶದ ಮುಂದೆ ಬೆತ್ತಲಾಗಿದ್ದೀರಿ, ಅಲ್ಲಿ ಬಟ್ಟೆ ತೆಗೆಯುವ ಅಗತ್ಯ ಯಾಕೆ ಬಂತು? ಎಂದು ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿ ಭಾನುವಾರ(ಫೆ. 22) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಕಾಂಗ್ರೆಸ್ ತನ್ನ ಕೊಳಕು ಮತ್ತು ಬೆತ್ತಲೆ ರಾಜಕೀಯಕ್ಕಾಗಿ ಎಐ ಅಂತ ಜಾಗತಿಕ ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿದೆ. ಈ ಘಟನೆ ನೋಡಿದ್ರೆ, ಹಳೆಯ ಪಕ್ಷವು ಸೈದ್ದಾಂತಿಕವಾಗಿ ಎಷ್ಟು ದಿವಾಳಿಯಾಗಿದೆ ಎಂಬುದನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದೊಳಗಿನ ಕೆಲವು ರಾಜಕೀಯ ಪಕ್ಷಗಳಿಗೆ ಭಾರತದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ತನ್ನದೇ ದೇಶವನ್ನು ದೂಷಿಸುವಲ್ಲಿ ನಿರತವಾಗಿದೆ. ನಾವು ಇದೀಗ ಭಾರತದಲ್ಲಿ ವಿಶ್ವದ ಅತಿದೊಡ್ಡ AI ಸಮ್ಮೇಳನವನ್ನು ಮಾಡಿದ್ದೇವೆ. ಆದರೆ ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆ ಏನು ಮಾಡಿದೆ? ಭಾರತಕ್ಕಾಗಿ ಜಾಗತಿಕ ಕಾರ್ಯಕ್ರಮವನ್ನು ತನ್ನ ಕೊಳಕು ಮತ್ತು ಬೆತ್ತಲೆ ರಾಜಕೀಯಕ್ಕೆ ವೇದಿಕೆಯನ್ನಾಗಿ ಪರಿವರ್ತಿಸಿತು ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ನನ್ನನ್ನು ದ್ವೇಷಿಸುತ್ತಾರೆ, ಅವರು ನನ್ನ ಸಮಾಧಿಯನ್ನು ಅಗೆಯಲು ಬಯಸುತ್ತಾರೆ. ನನ್ನ ತಾಯಿಯನ್ನು ಅವಮಾನಿಸಲು ಸಹ ಹಿಂಜರಿಯುವುದಿಲ್ಲ. ಎಐ ಜಾಗತಿಕ ಶೃಂಗಸಭೆಯು ಬಿಜೆಪಿ ಕಾರ್ಯಕ್ರಮವಲ್ಲ ಎಂಬುದನ್ನು ಕಾಂಗ್ರೆಸ್ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು. ಅದು ದೇಶದ ಕಾರ್ಯಕ್ರಮ ಎಂಬುದನ್ನು ಮರೆಯಬಾರದಿತ್ತು ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಇದೇ ತಿಂಗಳು ಫೆ. 20ರಂದು (ಶುಕ್ರವಾರ) ದೆಹಲಿಯ ಭಾರತ್ ಮಂಟಪದಲ್ಲಿ ಅಂತರಾಷ್ಟ್ರೀಯ ಮಟ್ಟದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆ' ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ನುಗ್ಗಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ಶರ್ಟ್‌ಗಳನ್ನು ಬಿಚ್ಚಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು (ಏಜೆನ್ಸೀಸ್).