ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಇಂದು(ಜು. 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) 'ಚಲೋ ಸಂಸದ್' ಯಾತ್ರೆ ಆಯೋಜಿಸಿದ್ದು, ಆರಂಭದಲ್ಲೇ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ದೆಹಲಿಯಲ್ಲಿ ಬಿಎನ್ಎಸ್ 163(ನಿಷೇಧಾಜ್ಞೆ) ಜಾರಿಯಿದ್ದು, ಸಂಸತ್ ಚಲೋ ಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದಾಗ್ಯೂ ಚಲೋ ನಡೆಸಿಯೇ ತಿರುತ್ತೇವೆ ಎಂದು ಸಿಜೆಪಿ ನಾಯಕರು ಹೇಳಿದ್ದರು. ತಡರಾತ್ರಿಯಿಂದ ಭಾರಿ ಪ್ರಮಾಣದಲ್ಲಿ ಪ್ರತಿಭಟನಾಕಾರರು ಜಂತರ್ ಮಂತರ್‌ನಲ್ಲಿ ಸೇರಿದ್ದಾರೆ. ಬೆಳಗ್ಗೆಯಿಂದಲೇ ಸಂಸತ್ ಕಡೆ ಯಾತ್ರೆಗೆ ಹೋರಾಟಗಾರರು ಸಜ್ಜಾದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು ಲಾಠಿ ಚಾರ್ಜ್ ಆಗಿದೆ.
ಇನ್ನೂ 20 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಹವಾಮಾನ ಮತ್ತು ಶಿಕ್ಷಣ ಕಾರ್ಯಕರ್ತ ಸೋನಮ್ ವಾಂಗ್‌ಚುಕ್, ಶಿಕ್ಷಣ ವ್ಯವಸ್ಥೆಯಲ್ಲಿನ ನ್ಯೂನತೆಗಳಿಗೆ ಸರ್ಕಾರ ಜವಾಬ್ದಾರಿಯನ್ನು ಒಪ್ಪಿಕೊಂಡರೆ ಅಥವಾ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಸಂಸತ್ ಸದಸ್ಯರು ಒಪ್ಪಿದರೆ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ.
ಅನುಮತಿ ನಿರಾಕರಣೆ
ಭಾನುವಾರ(ಜು. 19) ಸಿಜೆಪಿಯ ಚಲೋ ಸಂಸತ್ ಯಾತ್ರೆಗೆ ಅನುಮತಿ ನಿರಾಕರಿಸಿ ಹೇಳಿಕೆ ಬಿಡುಗಡೆ ಮಾಡಿದ್ದ ದೆಹಲಿ ಪೊಲೀಸರು, ಸಿಜೆಪಿ ಪ್ರಸ್ತಾಪಿಸಿರುವ 'ಚಲೋ ಸಂಸದ್' ಯಾತ್ರೆಗೆ ಪಕ್ಷ ಅನುಮತಿ ಕೋರಿಲ್ಲ. ನವದೆಹಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿಯಲ್ಲಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಿನಲ್ಲಿ ಇರಬಾರದು ಮತ್ತು ರ್ಯಾಲಿಗಳು, ಪ್ರತಿಭಟನೆಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದರು.
ಆದಾಗ್ಯೂ, ಪೂರ್ವಾನುಮತಿಯೊಂದಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಬಹುದು. ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 20 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ನಿಷೇಧಾಜ್ಞೆಗಳನ್ನು ಉಲ್ಲಂಘಿಸುವವರ ವಿರುದ್ಧ ಬಿಎನ್ಎಸ್ ಸೆಕ್ಷನ್ 223 ಮತ್ತು ಇತರ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ (ಏಜೆನ್ಸೀಸ್).