ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ
ಮುಂಬೈ: ಸಿನಿಮಾ ರಂಗ ಒಂದು ಉದ್ಯಮ ಅದರಲ್ಲಿ ಕೆಲಸಕ್ಕೂ 8 ಗಂಟೆಯ ಸಮಯ ನಿಗದಿ ಮಾಡಬೇಕು ಎಂಬ ವಿಚಾರ ಚರ್ಚೆಯಾಗುತ್ತಿರುವ ಸಮಯದಲ್ಲೇ ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಅವರ ಕೆಲಸ ಮತ್ತು ವೃತ್ತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಅವರ ಕೆಲಸದ ನೀತಿಯೊಂದಿಗೆ ತಮ್ಮ ಕೆಲಸದ ನೀತಿಯನ್ನು ಹೋಲಿಸಿರುವ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಇಷ್ಟಪಟ್ಟು ಲೈಕ್ ಮಾಡಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಬೇಗನೆ ಸೆಳೆದಿದೆ.
ವೈರಲ್ ಆದ ರೀಲ್ಸ್ನಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬ, ಪ್ರಿಯಾಂಕಾ ಚೋಪ್ರಾ ಅವರ ಕೆಲಸ ಮತ್ತು ಶಿಸ್ತಿನ ಬಗ್ಗೆ ಹೊಗಳಿದ್ದಾನೆ. ಇತ್ತೀಚೆಗೆ ನಟಿ ಮುಂಬೈಗೆ ಭೇಟಿ ನೀಡಿ ಜೆಟ್‌ಲ್ಯಾಗ್ ಅಥವಾ ವಿಶೇಷ ಬೇಡಿಕೆಗಳಿಲ್ಲದೆ ಹಲವು ಶೂಟ್‌ಗಳನ್ನು ಪೂರ್ಣಗೊಳಿಸಿ ಅಮೆರಿಕಕ್ಕೆ ಮರಳಿದ್ದನ್ನು ಉಲ್ಲೇಖಿಸಿ ಅವರನ್ನು ನಿಜವಾದ ಜಾಗತಿಕೆ ತಾರೆ ಕರೆದಿದ್ದಾನೆ. ಮತ್ತೊಂದಡೆ 8 ಗಂಟೆ ಕೆಲಸದ ಸಮಯ ನಿಗದಿಗೆ ಬೇಡಿಕೆ ಇಟ್ಟ ದೀಪಿಕಾ ಪಡುಕೋಣೆಯವರನ್ನು ಟೀಕಿಸಿದ್ದಾನೆ. ಈ ರೀಲ್ಸ್ಗೆ ಪ್ರಿಯಾಂಕಾ ಲೈಕ್ ಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಪ್ರಿಯಾಂಕಾ ಚೋಪ್ರಾ ಅವರ ಪರಿಶ್ರಮ, ಅಂತಾರಾಷ್ಟ್ರೀಯ ವೃತ್ತಿಜೀವನ, ಕೆಲಸದ ಬಗ್ಗೆ ಅಭಿಮಾನಿಗಳು ಅವರನ್ನು ಶ್ಲಾಘಿಸಿದ್ದಾರೆ. ಅದ್ಯಾಗೂ ಕೆಲವರು ಇತರೆ ನಟಿಯರ ಜೊತೆಗಿನ ಹೋಲಿಕೆಯನ್ನು ಅನಗತ್ಯ ಎಂದು ಹೇಳಿದ್ದಾರೆ. ದೀಪಿಕಾ ಅವರ 8 ಗಂಟೆಗಳ ವರ್ಕ್ ಶಿಫ್ಟ್ ಬೇಡಿಕೆಯು ಆರೋಗ್ಯಕರ ವರ್ಕ್-ಲೈಫ್ ಬ್ಯಾಲೆನ್ಸ್‌ಗಾಗಿ ಎಂದು ವಾದಿಸಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಜೊತೆಗಿನ ಸ್ಪಿರಿಟ್ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರ ಬಂದಾಗ 8 ಗಂಟೆಗಳ ವರ್ಕ್ ಶಿಫ್ಟ್ ಬಗ್ಗೆ ಚರ್ಚೆ ನಡೆದಿತ್ತು. ದೀಪಿಕಾ ಶೂಟಿಂಗ್ ಬಗ್ಗೆ ಹಲವು ಷರತ್ತುಗಳನ್ನು ಹಾಕಿದ್ದರು, ಅವುಗಳೆಲ್ಲವನ್ನೂ ನಿರ್ಮಾಪಕರು ಪೂರೈಸಲು ಆಗಲ್ಲ ಎಂದ ಬಳಿಕ ಚಿತ್ರದಿಂದ ಹಿಂದೆ ಸರಿದರು ಎಂದು ಸುದ್ದಿಯಾಗಿತ್ತು (ಏಜೆನ್ಸೀಸ್).