Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ರಾಷ್ಟ್ರ ಹಿತಾಸಕ್ತಿಗಿಂತ ಪಕ್ಷಗಳ ಹಿತವೇ ಮುಖ್ಯವಾಯಿತೇ..? ಮಸೂದೆ ಸೋತಾಗ ಪ್ರತಿಪಕ್ಷಗಳು ಚಪ್ಪಾಳೆ ತಟ್ಟಿದ್ದು ನಾಚಿಕೆಗೇಡು ಎಂದ ಪ್ರಧಾನಿ ಮೋದಿ | Narendra Modi

Narendra Modi: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳು ಸಾರ್ವಜನಿಕ ಹಿತಾಸಕ್ತಿಗಿಂತ ತಮ್ಮ ರಾಜಕೀಯಕ್ಕೇ ಹೆಚ್ಚಿನ ಆದ್ಯತೆ ನೀಡಿವೆ ಎಂದು ಆರೋಪಿಸಿದ್ದಾರೆ.
ಶನಿವಾರ (ಏ.18) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಸಂಕುಚಿತ ಮತ್ತು ಸ್ವಾರ್ಥಪರ ರಾಜಕೀಯದ ಕಾರಣದಿಂದಾಗಿ, ನಮ್ಮ ದೇಶದ ತಾಯಂದಿರು ಮತ್ತು ಸಹೋದರಿಯರು ಅದರ ಪರಿಣಾಮಗಳನ್ನು ಅನುಭವಿಸಬೇಕಾಯಿತು ಎಂದರು.

ಕ್ಷಮೆ ಯಾಚಿಸಿದ ಪ್ರಧಾನಿ

ಇಂದು ನಾನು ಇಲ್ಲಿ ಒಂದು ಪ್ರಮುಖ ವಿಷಯವನ್ನು ಚರ್ಚಿಸಲು ಬಂದಿದ್ದೇನೆ, ವಿಶೇಷವಾಗಿ ಈ ದೇಶದ ಮಹಿಳೆಯರಿಗಾಗಿ. ಈ ದೇಶದ ಪ್ರತಿಯೊಬ್ಬ ನಾಗರಿಕನೂ ಮಹಿಳಾ ಪ್ರಗತಿ ಹೇಗೆ ಸ್ಥಗಿತಗೊಂಡಿದೆ ಎಂಬುದನ್ನು ನೋಡುತ್ತಿದ್ದಾನೆ. ಶಾಸಕಾಂಗಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ನಾವು ಯಶಸ್ವಿಯಾಗಲಿಲ್ಲ. ನಾರಿ ಶಕ್ತಿ ಆಡಳಿತದಲ್ಲಿ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಾನು ದೇಶದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ ಎಂದರು.
ಮಸೂದೆ ಸೋತಾಗ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಪ್ರಧಾನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿನ್ನೆ ದೇಶಾದ್ಯಂತ ಕೋಟ್ಯಂತರ ಮಹಿಳೆಯರು ಸಂಸತ್ತನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಮಹಿಳೆಯರ ಹಿತಾಸಕ್ತಿಗಾಗಿ ಮಂಡಿಸಿದ್ದ ಈ ಪ್ರಸ್ತಾವನೆ ಸೋತಾಗ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಎಸ್‌ಪಿಯಂತಹ ವಂಶಪಾರಂಪರ್ಯ ಪಕ್ಷಗಳು ಸಂಭ್ರಮಾಚರಣೆಯಲ್ಲಿ ಚಪ್ಪಾಳೆ ತಟ್ಟುತ್ತಿದ್ದವು. ಇದನ್ನು ನೋಡಿ ನನಗೆ ತುಂಬಾ ದುಃಖವಾಯಿತು ಎಂದು ಮೋದಿ ಹೇಳಿದರು.
21ನೇ ಶತಮಾನದ ಮಹಿಳೆಯರು ಸತ್ಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು. ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ಈ ಪಕ್ಷಗಳು ಮಾಡಿರುವ ಪಾಪಕ್ಕೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ. ಈ ಪಕ್ಷಗಳು ಸಂವಿಧಾನ ನಿರ್ಮಾತೃಗಳ ಭಾವನೆಗಳನ್ನು ಅಗೌರವಗೊಳಿಸಿವೆ. ಈ ನಾರಿ ಶಕ್ತಿ ವಂದನ ಅಧಿನಿಯಮವು ಯಾರಿಂದಲೂ ಏನನ್ನೂ ಕಸಿದುಕೊಳ್ಳುವ ಬಗ್ಗೆ ಅಲ್ಲ, ಬದಲಿಗೆ ಅದು ಎಲ್ಲರಿಗೂ ಏನನ್ನಾದರೂ ನೀಡುವ ಬಗ್ಗೆ ಇತ್ತು ಎಂದು ವಿವರಿಸಿದರು.

ತಿದ್ದುಪಡಿಯ ಅಗತ್ಯತೆ ಮತ್ತು ಕಾಂಗ್ರೆಸ್ ಅಡೆತಡೆ

ನಾರಿ ಶಕ್ತಿ ವಂದನ ತಿದ್ದುಪಡಿ ಇಂದಿನ ಅಗತ್ಯವಾಗಿತ್ತು ಎಂದ ಪ್ರಧಾನಿ, ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ದೇಶದ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಬಲಪಡಿಸುವುದು ಮತ್ತು ಸಮತೋಲಿತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿತ್ತು. ಪ್ರತಿ ರಾಜ್ಯದ ಧ್ವನಿಯನ್ನು ಹೆಚ್ಚಿಸುವ ಈ ಪ್ರಾಮಾಣಿಕ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಸತ್ತಿನಲ್ಲಿ ಸೋಲಿಸಿವೆ. ಅವರು ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ತಡೆಯಲು ಪದೇ ಪದೇ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಟುಂಬ ರಾಜಕೀಯವನ್ನೇ ಆಶ್ರಯಿಸಿರುವ ಪಕ್ಷಗಳು ಮಹಿಳೆಯರಿಗೆ ಅಧಿಕಾರ ನೀಡಲು ಭಯಪಡುತ್ತಿವೆ, ಹೊರಗಿನ ಹೆಣ್ಣುಮಕ್ಕಳು ಬೆಳೆಯುವುದು ವಿಪಕ್ಷಗಳಿಗೆ ಇಷ್ಟವಿಲ್ಲ, ಮಹಿಳೆಯರಿಗೆ ಅಧಿಕಾರ ನೀಡಿದರೆ ತಮ್ಮ ನಾಯಕತ್ವಕ್ಕೆ ಸವಾಲು ಎದುರಾಗುತ್ತದೆ ಎಂಬ ಭಯ ಅವರೆಲ್ಲರಲ್ಲೂ ಆವರಿಸಿದೆ, ಲಕ್ಷಾಂತರ ಮಹಿಳೆಯರು ಇಂದು ಪಂಚಾಯತ್‌ಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಅವರಿಗೆಲ್ಲಾ ಹೆಚ್ಚಿನ ಸ್ಥಾನಗಳು ದೊರೆಯುತ್ತವೆ ಎಂಬ ಕಾರಣಕ್ಕಾಗಿಯೇ ಈ ಪಕ್ಷಗಳು ತಿದ್ದುಪಡಿಯನ್ನು ವಿರೋಧಿಸಿವೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಕಿಡಿಕಾರಿದರು.

ಸುಳ್ಳುಗಳ ಸರಮಾಲೆ..

ಕಾಂಗ್ರೆಸ್ ಯಾವಾಗಲೂ ಅಗತ್ಯ ಸುಧಾರಣೆಗಳ ಬಗ್ಗೆ ಸುಳ್ಳು ಹರಡುತ್ತಿದೆ ಎಂದು ಪ್ರಧಾನಿ ಕಿಡಿಕಾರಿದರು. "ಕಾಂಗ್ರೆಸ್ ದಶಕಗಳಷ್ಟು ಹಳೆಯದಾದ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಈಗಾಗಲೇ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್, ಈಗ ಪ್ರಾದೇಶಿಕ ಪಕ್ಷಗಳ ಮೇಲೆ ಸವಾರಿ ಮಾಡುತ್ತಿರುವ ಪರಾವಲಂಬಿಯಾಗಿದೆ. ಈ ಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಾ ವಿಭಜನೆ ಮತ್ತು ಆಳ್ವಿಕೆಯ ರಾಜಕೀಯವನ್ನು ಅನುಸರಿಸುತ್ತಿವೆ," ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕಟುವಾಗಿ ಟೀಕಿಸಿದರು.